ಬೆಳಗಾವಿ ದರೋಡೆ ಪ್ರಕರಣಕ್ಕೆ ಹೊಸ ತಿರುವು: ದೂರುದಾರ ಸೇರಿ ಮೂವರು ವಶಕ್ಕೆ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಿನ್ನಾಭರಣ ವ್ಯಾಪಾರಿಯ ಕೋಟ್ಯಂತರ ರೂಪಾಯಿ ನಗದು ಸಮೇತ ಕಾರ್ ದರೋಡೆಯಾಗಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸೇರಿ ಮೂವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶನಿವಾರ ನೇರ್ಲಿ ಸಮೀಪ ಪತ್ತೆಯಾಗಿದ್ದ ಕಾರ್ ನಲ್ಲಿ ಹ್ಯಾಂಡ್ ಬ್ರೇಕ್ ಕೆಳಗೆ ಬಚ್ಚಿಟ್ಟಿದ್ದ 1.01 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದರು.

ನವೆಂಬರ್ 15 ರಂದು ಹುಕ್ಕೇರಿ ತಾಲೂಕಿನ ಹರಗಾಪುರ ಬಳಿ ಕೊಲ್ಲಾಪುರದಿಂದ ಬರುತ್ತಿದ್ದ ಕಾರ್ ಅಡ್ಡಗಟ್ಟಿ ದರೋಡೆ ಮಾಡಲಾಗಿದೆ ಎಂದು ಮಹಾರಾಷ್ಟ್ರದ ಸೂರಜ್ ದೂರು ನೀಡಿದ್ದರು. ನೇರ್ಲಿ ಸಮೀಪ ಕಾರ್ ಪತ್ತೆಯಾಗಿದ್ದು, ದೂರು ನೀಡಿದವರ ಮೇಲೆಯೇ ಸಂಶಯ ಬಂದಿದೆ. ಕಾರ್ ಚಾಲಕ ಆರೀಫ್ ಶೇಖ್, ಅದರಲ್ಲಿ ಪ್ರಯಾಣಿಸುತ್ತಿದ್ದ ಸೂರಜ್ ಮತ್ತು ಅಜಯ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

75 ಲಕ್ಷ ರೂಪಾಯಿ ಕಳುವಾಗಿದೆ ಎಂದು ದೂರು ನೀಡಲಾಗಿತ್ತು. ಆದರೆ, ಕಾರಿನಲ್ಲಿ 1.01 ಕೋಟಿ ರೂಪಾಯಿ ಪತ್ತೆಯಾಗಿದೆ. ಈ ಕುರಿತಾಗಿಯೂ ತನಿಖೆ ನಡೆಸಲಾಗಿದೆ.

ಮಹಾರಾಷ್ಟ್ರದಿಂದ ಹಳೇ ಚಿನ್ನವನ್ನು ಕೇರಳಕ್ಕೆ ಸಾಗಿಸಿ ಮಾರಾಟ ಮಾಡಲಾಗುತ್ತಿತ್ತು ಎನ್ನುವುದು ವಿಚಾರಣೆ ವೇಳೆ ಗೊತ್ತಾಗಿದ್ದು, ಈ ಕುರಿತಾಗಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಒಂದು ಕೋಟಿಗೂ ಅಧಿಕ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅಲ್ಲದೆ ಕಾರ್ ಮುಂಭಾಗದ ಎರಡು ಸೀಟುಗಳ ಮಧ್ಯೆ ಇರುವ ಗೇರ್ ಬಾಕ್ಸ್ ಹ್ಯಾಂಡ್ ಬ್ರೇಕ್ ಕೆಳಗೆ ಮೂಲವಿನ್ಯಾಸ ಬದಲಿಸಿ ಬಾಕ್ಸ್ ನಿರ್ಮಿಸಿ ಅದರಲ್ಲಿ ಹಣ ಸಾಗಿಸುತ್ತಿದ್ದರು.  ಈ ಬಗ್ಗೆ ಕೂಡ ಮೋಟಾರು ವಾಹನಗಳ ಕಾಯ್ದೆಯಡಿ ಕಾರ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read