ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣಾ ಕಣ ರಣಾಂಗಣವಾಗಿ ಮಾರ್ಪಟ್ಟಿದೆ. ಪೊಲೀಸರ ಎದುರೇ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರು ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.
ಡಿಸಿಸಿ ಬ್ಯಾಂಕ್ ಚುನಾವಣೆ ಮುಂದೂಡಬೇಕು ಎಂಬ ಉದ್ದೇಶದಿಂದ ಠರಾವು ಪಾಸ್ ಮಾಡಬೇಕಿದ್ದ ಸೆಕ್ರೆಟರಿಯನ್ನೇ ಕಿಡ್ನ್ಯಾಪ್ ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದ್ದರು. ಸೆಕ್ರೆಟರಿ ಭೀಮಪ್ಪ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಡಿಸಿಸಿ ಬ್ಯಾಂಕ್ ಎದುರು ತೆರಳುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಅಲ್ಲದೇ ಕಾರಿನ ಗಾಜು ಒಡೆಯಲು ಯತ್ನಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಬಿಜೆಪಿ ಬೆಬಲಿತ ಕಾರ್ಯಕರ್ತರು ಕಾರಿನ್ನು ಸುತ್ತುವರೆದು ಭೀಮಪ್ಪ ಅವರನ್ನು ಕಾರಿನಿಂದ ಇಳಿಸಿ ಕರೆತಂದಿದ್ದಾರೆ.
ಈ ವೇಳೆ ಪೊಲೀಸರ ಎದುರೇ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡಿದ್ದು, ಹೊಡೆದಾಡಿಕೊಂಡಿದ್ದಾರೆ. ಕಾಂಗ್ರೆಸ್ ಸದಸ್ಯರ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಡಿಸಿಸಿ ಬ್ಯಾಂಕ್ ಚುನಾವಣೆ ಮುಂದೂಡಬೇಕೆಂಬ ಹುನ್ನಾರದಿಂದ ಸೆಕ್ರೆಟರಿ ಕಿಡ್ನ್ಯಾಪ್ ಮಾಡಲು ಕೈ ಕಾರ್ಯಕರ್ತರು ಯತ್ನಿಸಿದ್ದಾರೆ ಎಂದು ಬಿಜೆಪಿಯವರು ಆರೋಪಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬೀಡು ಬಿಟ್ಟಿದ್ದಾರೆ.