ಬೆಂಗಳೂರು: ರಸ್ತೆ ಗುಂಡಿಗಳ ಬಗ್ಗೆ ಬಿಬಿಎಂಪಿಗೆ ಸಾರ್ವಜನಿಕರು ಎಕ್ಸ್ ಖಾತೆಯಲ್ಲಿ ದೂರು ನೀಡಿದರೆ ಅಂತವರ ಖಾತೆಯನ್ನು ಬ್ಲಾಕ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪಾಲಿಕೆಯ ಈ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ರಸ್ತೆ ಗುಂಡಿಗಳ ಬಗ್ಗೆ ಬಿಬಿಎಂಪಿಗೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆ ಮೂಲಕ ದೂರು ನೀಡಿದರೆ ಅಂತವರ ಖಾತೆಗಳನ್ನು ಬ್ಲಾಕ್ ಮಾಡಲಾಗುತ್ತಿದೆ. ಬಿಬಿಎಂಪಿ ಐಟಿ ಸೆಲ್ ವಿಭಾಗದ ಈ ನಡೆಗೆ ಸಾರ್ವಜನಿಕರು ಕಿಡಿಕಾರಿದ್ದಾರೆ.
ಕೆಲ ದಿನಗಳ ಹಿಂದೆ ನೀತು ಎಂಬ ಮಹಿಳೆ ರಸ್ತೆ ಮಾರ್ಗ ಸರಿಪಡಿಸುವಂತೆ ಟ್ವೀಟ್ ಮೂಲಕ ಬಿಬಿಎಂಪಿಗೆ ಮನವಿ ಮಾಡಿದ್ದರು. ಇದಕ್ಕೆ ಬಿಬಿಎಂಪಿ ಯಾವುದೇ ಪ್ರತಿಕ್ರಿಯೆ ನೀಡದೇ ಬದಲಾಗಿ ಅವರ ಖಾತೆಯನ್ನು ಬ್ಲಾಕ್ ಮಾಡಿದೆ. ಕೇವಲ ನೀತು ಅವರಿಗೆ ಮಾತ್ರವಲ್ಲ ದೂರು ನೀಡಿದ ಹಲವರ ಖಾತೆಗಳನ್ನು ಇದೇ ರೀತಿ ಬ್ಲಾಕ್ ಮಾಡಲಾಗಿದೆ.
ರಸ್ತೆ ಗುಂಡಿ ಸೇರಿದಂತೆ ಯಾವುದೇ ದೂರುಗಳಿದ್ದರೂ ಸಾಮಾಜಿಕ ಜಾಲತಾಣಗಳ ಮೂಲಕ ಗಮನಕ್ಕೆ ತನ್ನಿ ಎಂದು ಡಿಸಿಎಂ, ಪಾಲಿಕೆ ಆಯುಕ್ತರು ಹೇಳುತ್ತಾರೆ. ಆದರೆ ದೂರು ನೀಡಲು ಹೋದರೆ ಖಾತೆಯನ್ನೇ ಬ್ಲಾಕ್ ಮಾಡಲಾಗುತ್ತಿದೆ. ಪಾಲಿಕೆಯ ಈ ಕ್ರಮ ಎಷ್ಟು ಸರಿ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.