ಗದಗ: ರಾಜ್ಯ ಸರ್ಕಾರ ಯೂರಿಯಾ ರಸಗೊಬ್ಬರ ಸಮರ್ಪಕವಾಗಿ ಹಂಚಿಕೆ ಮಾಡಿಲ್ಲ ಎಂದು ಸಂಸದ ಬಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬೊಮ್ಮಾಯಿ, ರಾಜ್ಯದಲ್ಲಿ ಯೂರಿಯಾ ಗೊಬ್ಬರ ಕೊರತೆಯನ್ನು ರಾಜ್ಯ ಸರ್ಕಾರ ತಪ್ಪಿಸಬಹುದಿತ್ತು. ಈ ವರ್ಷ ಮಳೆ ಮುಂಚಿತವಾಗಿಯೇ ಆಗಿದೆ. ಎಲ್ಲಿ ಗೊಬ್ಬರದ ಅಗತ್ಯವಿದೆ ಅಲ್ಲಿ ಪೂರೈಕೆ ಮಾಡಬೇಕಿತ್ತು. ಬಫರ್ ಸ್ಟಾಕ್ ಇಟ್ಟುಕೊಳ್ಳಬೇಕಿತ್ತು. ನಿರ್ವಹಣೆ ಸರಿಯಾಗಿ ಆಗಿಲ್ಲ ಎಂದು ಹೇಳಿದರು.
ಹೆಚ್ಚಿನ ರಸಗೊಬ್ಬರಕ್ಕೆ ರಾಜ್ಯ ಸರ್ಕಾರ ಬೇಡಿಕೆ ಇಟ್ಟಿದೆ. ನಾನೂ ಕೇಂದ್ರ ಕೃಷಿ ಮತ್ತು ರಸಗೊಬ್ಬರ ಸಚಿವರ ಜೊತೆ ಮಾತನಾಡಿ ಹೆಚ್ಚುವರಿ ಗೊಬ್ಬರ ಕೊಡಿಸುವ ಕೆಲಸ ಮಾಡುತ್ತೇನೆ. ಅದಕ್ಕಿಂತ ಮುಖ್ಯವಾಗಿ ಈಗಾಗಲೇ ಬರುತ್ತಿರುವ ಗೊಬ್ಬರವನ್ನು ಸಮರ್ಪಕವಾಗಿ ಹಂಚುವ ಕೆಲಸವನ್ನು ಕೃಷಿ ಇಲಾಖೆ ಮತ್ತು ಮಂತ್ರಿಗಳು ಮಾಡಬೇಕು ಎಂದು ಹೇಳಿದರು.
ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೈಸೂರು ರಾಜ ವಂಶಸ್ಥ ನಾಲ್ವಡಿ ಕೃಷ್ಣರಾಜ ಒಡೆಯವರ್ ಅವರಿಗೆ ಹೋಲಿಕೆ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಸಂಸದರು, ಯತೀಂದ್ರ ಅವರು ತಮ್ಮ ತಂದೆಯ ಸಾಧನೆ ಹೇಳಲು ಒಡೆಯರ್ ಅವರಿಗೆ ಹೋಲಿಕೆ ಮಾಡಿದ್ದಾರೆ. ಸೂರ್ಯನಿಗೆ ಯಾವುದಾದರೂ ಸಣ್ಣ ಬೆಳಕನ್ನು ಹೋಲಿಕೆ ಮಾಡಲು ಸಾಧ್ಯವೇ ಸೂರ್ಯ ಸೂರ್ಯನೇ ಎಂದು ತಿರುಗೇಟು ನೀಡಿದರು.