ಮೈಸೂರು: ನಾನು ನನ್ನ ಧರ್ಮವನ್ನು ಪಾಲಿಸುತ್ತೇನೆ. ಹಾಗೇ ಬೇರೆ ಧರ್ಮದ ಬಗ್ಗೆಯೂ ನನಗೆ ಗೌರವವಿದೆ ಎಂದು ಬೂಕರ್ ಪ್ರಶಸ್ತಿ ವಿಜೇತೆ, ಲೇಖಕಿ ಬಾನು ಮುಷ್ತಾಕ್ ತಿಳಿಸಿದ್ದಾರೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ ಬಳಿಕ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾನು ಮುಷ್ತಾಕ್, ದಸರಾಗೆ ಚಾಲನೆ ನೀಡಿದ್ದು, ಸಂತೋಷ ತಂದಿದೆ. ಎಲ್ಲರೂ ಸಹಕಾರ ನೀಡಿದ್ದಕ್ಕಾಗಿಯೂ ಧನ್ಯವಾದಗಳು ಎಂದರು.
ನಾನು ನನ್ನ ಧರ್ಮವನ್ನು ಪಾಲಿಸುತ್ತೇನೆ. ಅದು ನನ್ನ ವೈಯಕ್ತಿಕ. ನಾನು ರೋಜಾ ಮಾಡುತ್ತೇನೆಯೋ, ಪ್ರಾರ್ಥನೆ ಸಲ್ಲಿಸುತ್ತೇನೆಯೋ ಅದು ನನ್ನ ಹಾಗೂ ಭಗವಂತನ ನಡುವಿನ ಸಂಬಂಧ. ಅದು ನನ್ನ ವೈಯಕ್ತಿಕ ವಿಚಾರ. ಹಾಗೇ ನಾನು ಬೇರೆ ಧರ್ಮಗಳನ್ನು ಅಪಾರವಾಗಿ ಗೌರವಿಸುತ್ತೇನೆ. ಅನಗತ್ಯವಾಗಿ ನನ್ನ ಮಾತುಗಳನ್ನು ಅಪಾರ್ಥ ಮಾಡಿ ತಿರುಚಬೇಡಿ ನನ್ನ ಮಾತುಗಳನ್ನು, ಭಾಷಣವನ್ನು ಪೂರ್ತಿಯಾಗಿ ಕೇಳಿ ಬಳಿಕ ಮಾತನಾಡಿ ಎಂದು ಹೇಳಿದರು.