ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೊತ್ಸವಕ್ಕೆ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಚಾಲನೆ ನೀಡಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡ ಅದಿದೇವತೆ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವ ಉದ್ಘಾಟಿಸಿದರು.
ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಲೇಖಕಿ ಬಾನು ಮುಷ್ತಾಕ್, ಚಾಮುಂಡಿ ತಾಯಿ ಕೃಪಾಶಿರ್ವಾದದಿಂದ ನಾನು ದಸರಾ ಉದ್ಘಾಟಿಸಿದ್ದೇನೆ. ಬೂಕರ್ ಪ್ರಶಸ್ತಿ ಬಂದರೆ ನನ್ನನ್ನು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬರುವುದಾಗಿ ನನ್ನ ಆಪ್ತ ಸ್ನೇಹಿತೆಯೊಬ್ಬಳು ಹರಕೆ ಹೊತ್ತಿದ್ದಳು. ಆದರೆ ಪ್ರಶಸ್ತಿ ಬಂದ ಬಳಿಕ ನನಗೆ ಬರಲು ಸಾಧ್ಯವಾಗಿರಲಿಲ್ಲ. ಈಗ ಕರ್ನಾಟಕ ಸರ್ಕಾರದ ಮೂಲಕವಾಗಿ ತಾಯಿ ಚಾಮುಂಡಿ ದೇವೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ. ಇದು ನನ್ನ ಜೀವನದ ಗೌರವದ ಘಳಿಗೆ ಎಂದು ಹೇಳಿದರು.
ತಾಯಿ ಚಾಮುಂಡಿ ಶಕ್ತಿಯ, ಧೈರ್ಯದ, ಮಮತೆಯ ಸಂಕೇತ. ನಮ್ಮೊಳಗಿನ ದ್ವೇಷ, ಅಸಹಿಷ್ಣತೆಯನ್ನು ನಾಶ ಮಾಡಲಿ. ದಸರಾ ಶಾಂತಿಯ ಹಬ್ಬ, ಇದು ಸರ್ವ ಜನಾಂಗದ ಶಾಂತಿಯ ತೋಟ. ಈ ನೆಲದ ಸುಗಂಧದ ಐಕ್ಯತೆ ಆಗಲಿ ಎಂದರು. ದಸರಾ ಕೇವಲ ಅಮೈಸೂರು, ನಾಡು, ದೇಶಕ್ಕೆ ಮಾತ್ರ ಸೀಮಿತವಾಗದೇ ಇಡೀ ಪ್ರಪಂಚದಾದ್ಯಂತ ನೆಲೆ ಕಂಡುಕೊಳ್ಳಲಿ ಎಂದರು.
ನಾವೆಲ್ಲರೂ ಒಂದೇ ಗಗನಡಿಯ ಪಯಣಿಗರು. ಆಕಾಶ ಯಾರನ್ನೂ ಬೇರ್ಪಡಿಸುವುದಿಲ್ಲ. ಭೂಮಿ ಯಾರನ್ನೂ ದೂರ ತಳ್ಳುವುದಿಲ್ಲ. ಮನುಷ್ಯ ಮಾತ್ರ ಗಡಿಗಳನ್ನು ಹಾಕಿಕೊಳ್ಳುತ್ತಾನೆ. ನಾವೇ ಈ ಗಡಿಗಳನ್ನು ಅಳಿಸಿ ಹಾಕಿಕೊಳ್ಳಬೇಕು ಎಂದು ತಿಳಿಸಿದರು.