ಬೆಂಗಳೂರಿನ ಸುರಂಗ ರಸ್ತೆ ನಿರ್ಮಾಣ: ಮೊದಲ ಹಂತದ ಯೋಜನೆಗೆ ಶೀಘ್ರವೇ ಟೆಂಡರ್: ಡಿಸಿಎಂ ಮಾಹಿತಿ

ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿನ ಎರಡು ಹಂತದ ಸುರಂಗ ರಸ್ತೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಮೊದಲ ಹಂತದ ಯೋಜನೆಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಂಗಳೂರಲ್ಲಿ ಸುರಂಗ ರಸ್ತೆ ನಿರ್ಮಾಣ ಹಾಗೂ ಮಂಡ್ಯದ ಕೆ ಆರ್ ಎಸ್ ನಲ್ಲಿ ಕಾವೇರಿ ಆರತಿ ನಡೆಸುವ ಸಂಬಂಧ ಡಿಸಿಎಂ ಡಿ ಕೆ ಶಿವಕುಮಾರ್ ಅವರು ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುರಂಗ ರಸ್ತೆಯ ಪ್ರವೇಶ ಹಾಗೂ ನಿರ್ಗಮನದ ಭಾಗದಲ್ಲಿ ಸಂಚಾರ ದಟ್ಟಣೆ ಆಗಬಾರದು ಎಂಬ ಉದ್ದೇಶದಿಂದ ಈ ಯೋಜನೆಗೆ ಟೆಂಡರ್ ಕರೆಯುವ ಮುನ್ನ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳು, ಪೊಲೀಸ್ ಇಲಾಖೆಯ ಡಿಜಿಪಿ, ಐಜಿಪಿ ಮತ್ತು ಸಂಚಾರಿ ಪೊಲೀಸ್ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ ಎಂದರು.

ವಿಧಾನಸೌಧದ ಒಂದು ಕಿ.ಮೀ ಸುತ್ತಮುತ್ತ ಎಲ್ಲೂ ನಿರ್ಗಮನಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಇಲ್ಲಿ ಟ್ರಾಫಿಕ್ ಜಾಮ್ ಆದರೆ ಎಲ್ಲಾಕಡೆ ಆಗುತ್ತದೆ. ಹೀಗಾಗಿ ಇದನ್ನು ಪರಿಶೀಲಿಸಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಾನು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಜಿಬಿಎ ಮುಖ್ಯ ಆಡಳಿತಾಧಿಕಾರಿಗಳು ಈ ಸಭೆ ಮಾಡಿದ್ದೇವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ 114 ಕಿ.ಮೀ ಎಲಿವೆಟೆಡ್ ಕಾರಿಡಾರ್ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದು, ಈ ಯೋಜನೆ ಸಂಬಂಧ ಸಂಚಾರ ಪೊಲೀಸ್ ಅಧಿಕಾರಿಗಳ ಅಭಿಪ್ರಾಯ ಪಡೆಯಲಾಗಿದೆ ಎಂದರು.

ಇನ್ನು ಬೆಂಗಳೂರಿನ ಕಸ ವಿಲೇವಾರಿ ವಿಚಾರವಾಗಿ ದೊಡ್ಡ ಕ್ಷೇತ್ರಗಳಲ್ಲಿ ಎರಡರಂತೆ ಪ್ರತಿಯೊಂದು ಕ್ಷೇತ್ರಕ್ಕೆ ಒಂದೊಂದರಂತೆ ಒಟ್ಟು 33 ಪ್ಯಾಕೇಜ್ ಗಳನ್ನು ಕರೆಯಲು ತೀರ್ಮಾನಿಸಿದ್ದೇವೆ. ಸುಮಾರು ₹4000 ಕೋಟಿ ಮೊತ್ತದ ಈ ಯೋಜನೆಗೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಏಳು ವರ್ಷಗಳ ಅವಧಿಗೆ ಟೆಂಡರ್ ಕರೆಯಲಾಗುತ್ತಿದೆ ಎಂದರು.

ಸ್ವಚ್ಛ ಬೆಂಗಳೂರು ಕಾರ್ಯಕ್ರಮದ ಮೂಲಕ ಬೆಂಗಳೂರಿನ ಎಲ್ಲಾ ಭಾಗಗಳಲ್ಲಿ ಇರುವ ಕಟ್ಟಡ ತ್ಯಾಜ್ಯ ಹಾಗೂ ಇತರೆ ಕಸವನ್ನು ಒಮ್ಮೆಲೇ ಸ್ವಚ್ಛ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಇಂಟಿಗ್ರೇಟ್ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಮಾಡಲು 15 ದಿನಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದರು.

ಕಾವೇರಿ ಆರತಿ ನಮ್ಮ ರಾಜ್ಯದ ಸಂಸ್ಕೃತಿ, ಪರಂಪರೆಯ ಪ್ರತೀಕವಾಗಲಿದೆ. ಕೊಡಗು, ಮಲೆನಾಡು, ಕರಾವಳಿ, ಬೆಂಗಳೂರು ಭಾಗದ ಆಚರಣೆ, ಈ ಭಾಗದ ಮಠಗಳನ್ನು ಒಳಗೊಂಡು ಈ ಕಾರ್ಯಕ್ರಮದ ವಿಧಾನ ರೂಪಿಸಲಾಗುವುದು. ವಾರಾಂತ್ಯದ 3 ದಿನಗಳ ಕಾಲ ಈ ಕಾರ್ಯಕ್ರಮ ನಡೆಯಬೇಕು ಎಂದು ನಾನು ಆಲೋಚಿಸುತ್ತಿದ್ದೇನೆ. ಪೂಜಾ ಕಾರ್ಯದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲಾಗುವುದು. ಇದಕ್ಕಾಗಿ ಕಾವೇರಿ ನಿಗಮದಲ್ಲಿ ₹92 ಕೋಟಿ ಹಣ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಇದರ ಜತೆಗೆ ಇಂಧನ ಇಲಾಖೆ, ಲೋಕೋಪಯೋಗಿ, ಪ್ರವಾಸೋದ್ಯಮ, ಧಾರ್ಮಿಕ ದತ್ತಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಈ ಕಾರ್ಯಕ್ರಮಕ್ಕೆ ಕೈ ಜೋಡಿಸಲಿದೆ. ಈ ಕಾರ್ಯಕ್ರಮದ ಸಾರ್ವಜನಿಕ ವೀಕ್ಷಣೆಗಾಗಿ 10 ಸಾವಿರ ಆಸನಗಳ ಗ್ಯಾಲರಿಯ ವಿನ್ಯಾಸ ಕೂಡ ಸಿದ್ಧವಾಗಿದೆ. ಈ ಕಾರ್ಯಕ್ರಮಕ್ಕೆ ಅತ್ಯುತ್ತಮ ಗೀತೆ ರಚನೆಗೆ ಆಹ್ವಾನ ನೀಡಿದ್ದೇವೆ ಎಂದರು.

ಈ ಕಾರ್ಯಕ್ರಮ ದಕ್ಷಿಣ ಭಾರತದ ಕಾರ್ಯಕ್ರಮವಾಗಲಿದೆ. ಕಾವೇರಿ ನದಿ ಹರಿಯುವ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು. ಈ ಎಲ್ಲಾ ವಿಚಾರಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ. ಬಹುತೇಕ ಎಲ್ಲಾ ನೀಲನಕ್ಷೆಗಳು ಸಿದ್ಧವಾಗಿವೆ. ಇವು ಪೂರ್ಣಗೊಂಡ ನಂತರ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read