ಬೆಂಗಳೂರು: ಭಜರಂಗಿ ಖ್ಯಾತಿಯ ನಟಿ ರುಕ್ಮಿಣಿ ವಿಜಯ್ ಕುಮಾರ್ ಅವರ ಬ್ಯಾಗ್, ಡೈಮಂಡ್ ರಿಂಗ್ ಕದ್ದ ಕ್ಯಾಬ್ ಚಾಲಕನನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೊಹಮ್ಮದ್ ಎಂದು ಗುರುತಿಸಲಾಗಿದೆ. ಈತ ಕ್ಯಾಬ್ ಚಾಲಕ ಎಂದು ತಿಳಿದುಬಂದಿದೆ. ನಟಿ ರುಕ್ಮಿಣಿ ಮೇ 11ರಂದು ಬೆಳಿಗ್ಗೆ ಚಿನ್ನಾಸ್ವಾಮಿ ಸ್ಟೇಡಿಯಂನ ಗೇಟ್ ನಂ.18ರ ಬ್ಳಿ ತಮ್ಮ ಕಾರು ಪಾರ್ಕ್ ಮಾಡಿ ವಾಕಿಂಗ್ ಗೆ ಹೋಗಿದ್ದರು. ಕಾರಿನಲ್ಲಿ ದುಬಾರಿ ಹ್ಯಾಂಡ್ ಬ್ಯಾಗ್, ಡೈಮಂಡ್ ರಿಂಗ್ ಗಳನ್ನು ಇಟ್ಟಿದ್ದರು. ವಾಕಿಂಗ್ ಹೋಗುವಾಗ ಕಾರು ಲಾಕ್ ಮಾಡುವುದನ್ನು ಮರೆತಿದ್ದಾರೆ. ಇದನ್ನು ಗಮನಿಸಿದ್ದ ಕ್ಯಾಬ್ ಚಲಕ ಮೊಹಮ್ಮದ್, ಬ್ಯಾಗ್, ಡೈಮಂದ್ ರಿಂಗ್, ವಾಚ್ ಕದ್ದು ಪರಾರಿಯಾಗಿದ್ದಾನೆ.
ನಟಿ ವಾಪಾಸ್ ಬಂದು ಕಾರು ತೆಗೆದಾಗ ವಸ್ತುಗಳೆಲ್ಲವೂ ಕಳುವಾಗಿದ್ದವು. ತಕ್ಷಣ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿ ಮೊಹಮ್ಮದ್ ನನ್ನು ಬಂಧಿಸಿದ್ದಾರೆ.
ಬಂಧಿತನಿಂದ 1,50,000 ರೂ.ಮೌಲ್ಯದ ಬ್ಯಾಗ್, 75,000 ಮೌಲ್ಯದ ಪರ್ಸ್, 10 ಲಕ್ಷ ಮೌಲ್ಯದ ಡಬಲ್ ಬ್ಯಾಂಡೆಡ್ ಡೈಮಂಡ್ ರಿಂಗ್, 9 ಲಕ್ಷ ಮೌಲ್ಯದ ರೊಲೆಕ್ಸ್ ವಾಚ್ ಸೇರಿ ಒಟ್ಟು 23 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.