ಬಾಗಲಕೋಟೆ: ನಾಡಿನೆಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಹಬ್ಬದ ಸಂದರ್ಭದಲ್ಲಿ ದೀಪಗಳನ್ನು ಬೆಳಗುವ ವೇಳೆ ಎಷ್ಟೇ ಜಾಗೃತಿ ವಹಿಸಿದರೂ ಕಡಿಮೆಯೇ. ಮನೆಯ ಬಾಗಿಲಿನಲ್ಲಿ ಹಚ್ಚಿದ್ದ ದೀಪದಿಂದ ಬೆಂಕಿ ಅವಘಡ ಸಂಭವಿಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ನಲ್ಲಿರುವ ಮನೆಯೊಂದರ ಬಾಗಿಲಿನಲ್ಲಿ ಹಚ್ಚಿದ್ದ ದೀಪದಿಂದ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿಯಿಂದಾಗಿ 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾಗಿದ್ದಾರೆ.
ಉಮೇಶ್ ಮೇಟಿ ಎಂಬುವವರ ಮನೆಯಲ್ಲಿ ಈ ಗಹ್ಟನೆ ನಡೆದಿದೆ. ಉಮೇಶ್ ಮೇಟಿ ಮನೆಯಲ್ಲಿ ಬಾಡಿಗೆ ಇದ್ದ ರಾಜೇಂದ್ರ ತಪಶೆಟ್ಟಿ ಕುಟುಂಬದವರು ಮನೆಯ ಮುಂದೆ ದೀಪ ಹಚ್ಚಿದ್ದರು. ದೀಪ ಅಲ್ಲಿಯೇ ಬಿದ್ದಿದ್ದ ಆಯಿಲ್ ಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಬೈಕ್ ಗಳು ಕೂಡ ಬೆಂಕಿಗಾಹುತಿಯಾಗಿವೆ. ಮನೆಗೂ ಬೆಂಕಿ ತಗುಲಿ ಮನೆ ಸುಟ್ಟು ಕರಕಲಾಗಿದೆ. ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ಕುಟುಂಬಗಳು ಮನೆಯಿಂದ ಹೊರಗೋಡಿಬಂದು ಬಚಾವ್ ಆಗಿವೆ.