ಮುಂಬೈ: ಏರ್ ಇಂಡಿಯಾ ವಿಮಾನದಲ್ಲಿ ಥಾಯ್ಲೆಂಡ್ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಸ್ಕತ್ ನಿಂದ ಮುಂಬೈಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಥಾಯ್ಲೆಂಡ್ ನ ಮಹಿಳೆ ಗುರುವಾರ ಮಗುವಿಗೆ ಜನ್ಮ ನೀಡಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಏರ್ ಇಂಡಿಯಾ, ಥಾಯ್ಲೆಂಡ್ ಮಹಿಳೆಗೆ ಪ್ರಯಾಣದ ವೇಳೆಯಲ್ಲಿ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ವಿಮಾನದಲ್ಲಿದ್ದ ಸಿಬ್ಬಂದಿ ಹೆರಿಗೆಗೆ ಸೂಕ್ತವಾದ ಎಲ್ಲ ವ್ಯವಸ್ಥೆ ಮಾಡಿದ್ದಾರೆ. ವಿಮಾನದ ಕ್ಯಾಬಿನ್ ಸಿಬ್ಬಂದಿ ಮತ್ತು ಪ್ರಯಾಣಿಕರಲ್ಲಿ ಒಬ್ಬ ನರ್ಸ್ ಹೆರಿಗೆಗೆ ಸಹಾಯ ಮಾಡಿದರು. ಆಗಸದಲ್ಲಿದ್ದಾಗಲೇ ಪೈಲೆಟ್ ಗಳು ಮಾಹಿತಿ ನೀಡಿದ್ದ ಕಾರಣ ವಿಮಾನ ಮುಂಬೈನಲ್ಲಿ ಲ್ಯಾಂಡಿಂಗ್ ಆಗುತ್ತಿದ್ದಂತೆ ನಿಲ್ದಾಣದಲ್ಲಿ ಕಾದಿದ್ದ ಆಂಬುಲೆನ್ಸ್ ಮತ್ತು ವೈದ್ಯಕೀಯ ತಂಡ ಸಮೀಪದ ಆಸ್ಪತ್ರೆಗೆ ಮಹಿಳೆ ಮತ್ತು ಮಗುವನ್ನು ಸಾಗಿಸಿದ್ದಾರೆ. ಇಬ್ಬರೂ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದೆ.
ಮಹಿಳೆ ತನ್ನ ತಾಯ್ನಾಡಿಗೆ ಮರಳಲು ಸಹಾಯ ಮಾಡಲು ಮುಂಬೈನಲ್ಲಿರುವ ಥೈಲ್ಯಾಂಡ್ ಕಾನ್ಸುಲೇಟ್ ಜನರಲ್ ಜೊತೆ ಸಂಪರ್ಕದಲ್ಲಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಿಳಿಸಿದೆ.