ಉಡುಪಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವುದಾಗಿ ಹೇಳಿಕೆ ನೀಡಿದ್ದ ಬುರುಡೆ ಚಿನ್ನಯ್ಯ ಪ್ರಕರಣ ಸಂಬಂಧ ಇದೇ ಮೊದಲ ಬಾರಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಧರ್ಮಸ್ಥಳದ ಮೇಲೆ ವೈಚಾರಿಕ ಆಕ್ರಮಣ ನಡೆದಿದೆ ಎಂದು ಗುಡುಗಿದ್ದಾರೆ.
ಉಡುಪಿಯ ಬಿಜೆಪಿ ಕಚೇರಿ ಶಿಲನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಎಲ್.ಸಂತೋಷ್, ಮೂರು ವರ್ಷದ ಹಿಂದೆ ಉಡುಪಿ ಶ್ರೀಕೃಷ್ಣ ಮಠದ ಮೇಲೂ ಆಕ್ರಮಣ ನಡೆದಿತ್ತು. ಈಗ ಧರ್ಮಸ್ಥಳದ ಮೇಲೆ ವೈಚಾರಿಕ ಆಕ್ರಮಣ ನಡೆದಿದೆ. ಸ್ವಲ್ಪ ದಿನಗಳಲ್ಲಿ ಮೂಡಬಿದರೆ ಮೇಲೂ ಆಕ್ರಮಣ ನಡೆಯಲಿದೆ ಎಂದಿದ್ದಾರೆ.
ಹುಲಿಗೆ ರಕ್ತದ ರುಚಿ ಸಿಕ್ಕಿದೆ. ವೈಚಾರಿಕ ರಾಜಕೀಯದ ಮೂಲಕ ಶಬರಿಮಲೆಯಲ್ಲಿ ಸ್ವಲ್ಪ ರಕ್ತದ ರುಚಿ ನೋಡಿದ್ದರು. ಈಶ ಆಶ್ರಮ, ಶನಿ ಸಿಂಗಾಪುರದಲ್ಲಿಯೂ ರಕ್ತದ ರುಚಿ ನೋಡಿದ್ದರು. ಧರ್ಮಸ್ಥಳದಲ್ಲಿ ರಕ್ತದ ರುಚಿ ನೋಡುವ ಕೆಲಸ ಮಾಡುತ್ತಲೇ ಇದ್ದಾರೆ. ನಡೆದಿರುವ ಆಕ್ರಮಣಕ್ಕೆ ಶಿಕ್ಷೆಯಾಗಬೇಕು. ಮಾಡುತ್ತಿರುವ ಅಪಪ್ರಚಾರಕ್ಕೂ ಶಾಸ್ತಿ ಆಗಬೇಕು. ಈ ಸಂಕಲ್ಪವನ್ನು ನಾವು ನಮ್ಮ ಕಾರ್ಯಾಲಯದಲ್ಲಿ ಮಾಡಬೇಕು ಎಂದರು.
ಇದು ನಮ್ಮ ಶ್ರದ್ಧೆ, ನಂಬಿಕೆ, ವಿಷಯದ ಮೇಲೆ ನಡೆದ ಆಕ್ರಮಣ. ಉಡುಪಿ ಮೇಲಿನ ಆಕ್ರಮಣವನ್ನು ಯಾಕೋ ಈಗ ಬಿಟ್ಟುಬಿಟ್ಟಿದ್ದಾರೆ. ಮತ್ತೆ ಯಾವಾಗ ಆಕ್ರಮಣ ಪಿಕ್ ಅಪ್ ಮಾಡ್ತಾರೋ ಗೊತ್ತಿಲ್ಲ. ಹಿಂದೂಗಳ ಶ್ರದ್ಧೆಯ ವಿಚಾರ ಹಾಗೂ ಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ. ಗೋವು, ಕುಟುಂಬ ವ್ಯವಸ್ಥೆ, ಮೌಲ್ಯಗಳು, ತೀರ್ಥ ಕ್ಷೇತ್ರಗಳು ಇವರ ಟಾರ್ಗೆಟ್ ಎಂದು ಕಿಡಿಕಾರಿದರು.
ಕುಂಭಮೇಳದ ಬಗ್ಗೆ ನಿರಂತರ ಅಪಪ್ರಚಾರ ನಡೆಯಿತು. ಕುಂಭಮೇಳಕ್ಕೆ ಹೋದರೆ ಜಗತ್ತಿನಲ್ಲಿ ಇಲ್ಲದ ಕಾಯಿಲೆಗಳು ಬರುತ್ತವೆ ಎಂದು ಹೇಳಿದರು. ಆದರೆ ದೇಶದ ನಂಬಿಕೆ ಗಟ್ಟಿಯಾಗಿದೆ. ಆರೋದ ಬಳಿಕ ಕೋಟ್ಯಂತರ ಭಕ್ತರ ಸಣ್ಖ್ಯೆ ಜಾಸ್ತಿಯಾಯಿತು. ನಾವು ಸವಾಲುಗಳನ್ನು ಎದುರಿಸುತ್ತೇವೆ. ದೇಶ ಮತ್ತು ಸಂಸ್ಕೃತಿಗೆ ಹಾಕಿರುವ ಸವಾಲಿಗೆ ಮುಟ್ತಿ ನೋಡಿಕೊಳ್ಳುವಂತೆ ಉತ್ತರ ನೀಡುತ್ತೇವೆ ಎಂದಿದ್ದಾರೆ.