ಮುಂಬೈ: ಮಹಾರಾಷ್ಟ್ರದ ವಿರಾರ್ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮರಾಠಿಯಲ್ಲಿ ಮಾತನಾಡಲು ನಿರಾಕರಿಸಿದ ರಿಕ್ಷಾ ಚಾಲಕನ ಮೇಲೆ ಶಿವಸೇನೆಯ (ಯುಬಿಟಿ) ಉದ್ಧವ್ ಠಾಕ್ರೆ ಬಣಕ್ಕೆ ಸೇರಿದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಚಾಲಕ ಈ ಹಿಂದೆ ವೈರಲ್ ವೀಡಿಯೊದಲ್ಲಿ ಹಿಂದಿ ಮತ್ತು ಭೋಜ್‌ಪುರಿಯಲ್ಲಿ ಮಾತನಾಡುವುದನ್ನು ಮುಂದುವರಿಸುವುದಾಗಿ ಘೋಷಿಸಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ರಿಕ್ಷಾ ಚಾಲಕ ನಾನು ಹಿಂದಿ, ಭೋಜ್‌ಪುರಿ, ಮಾತನಾಡುತ್ತೇನೆ, ನೀವು ಏನು ಮಾಡುತ್ತೀರಿ? ಎಂದು ಧಿಕ್ಕರಿಸಿ ಹೇಳಿದ ವೀಡಿಯೊ ಕಾಣಿಸಿಕೊಂಡು ವಿವಾದಕ್ಕೆ ಕಾರಣವಾಗಿತ್ತು.
ಆಕ್ಷೇಪಾರ್ಹ ಭಾಷೆಯೊಂದಿಗೆ ಕೂಡಿದ ಈ ವೀಡಿಯೊ, ಮಹಾರಾಷ್ಟ್ರದಲ್ಲಿ ಭಾಷಾ ಆದ್ಯತೆಗಳ ಕುರಿತು ಸಾಮಾಜಿಕ ಮಾಧ್ಯಮ ಮತ್ತು ಸ್ಥಳೀಯ ನಿವಾಸಿಗಳಲ್ಲಿ ಚರ್ಚೆಗೆ ಕಾರಣವಾಗಿತ್ತು.
ಶನಿವಾರ ಸಂಜೆ ವಿರಾರ್ ರೈಲ್ವೆ ನಿಲ್ದಾಣದ ಬಳಿ, ಶಿವಸೇನೆ (ಯುಬಿಟಿ) ಕಾರ್ಯಕರ್ತರು ಚಾಲಕನನ್ನು ಪತ್ತೆಹಚ್ಚಿ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಚಾಲಕನಿಗೆ ಕಪಾಳಮೋಕ್ಷ ಮಾಡಿ ನಂತರ ಸಾರ್ವಜನಿಕವಾಗಿ ಅವಮಾನಿಸಲಾಗುತ್ತಿರುವ ವೀಡಿಯೊ ಹೊರಬಿದ್ದಿದೆ. ನಾನು ಮರಾಠಿ ಜನರಿಗೆ ಕ್ಷಮೆಯಾಚಿಸುತ್ತೇನೆ, ಮಹಾರಾಷ್ಟ್ರಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿ ಅವರನ್ನು ಕೈಮುಗಿದು ಕ್ಷಮೆಯಾಚಿಸುವಂತೆ ಮಾಡಿದ್ದಾರೆ.
ಸ್ಥಳದಲ್ಲಿದ್ದ ಶಿವಸೇನೆ (ಯುಬಿಟಿ) ವಿರಾರ್ ನಗರ ಮುಖ್ಯಸ್ಥ ಉದಯ್ ಜಾಧವ್ ನಂತರ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಯಾರಾದರೂ ಮರಾಠಿ ಭಾಷೆ, ಮಹಾರಾಷ್ಟ್ರ ಅಥವಾ ಮರಾಠಿ ಜನರನ್ನು ಅವಮಾನಿಸಲು ಧೈರ್ಯ ಮಾಡಿದರೆ, ಅವರಿಗೆ ನಿಜವಾದ ಶಿವಸೇನಾ ಶೈಲಿಯಲ್ಲಿ ಉತ್ತರ ಸಿಗುತ್ತದೆ. ನಾವು ಸುಮ್ಮನಿರುವುದಿಲ್ಲ ಎಂದು ಜಾಧವ್ ತಿಳಿಸಿದ್ದಾರೆ.
ಕೆಲವರು ಶಿವಸೇನಾ ಕಾರ್ಯಕರ್ತರ ಕ್ರಮವನ್ನು ಬೆಂಬಲಿಸಿದ್ದರೂ, ಅನೇಕರು ಹಲ್ಲೆಯನ್ನು ಖಂಡಿಸಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಈ ಘಟನೆಯ ಕುರಿತು ಪೊಲೀಸರು ಯಾವುದೇ ಅಧಿಕೃತ ದೂರು ದಾಖಲಿಸಿಲ್ಲ.