ಚಾಮರಾಜನಗರ: ಏಪ್ರಿಲ್ 24 ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನ ಮಲೆಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ಹೇರಲಾಗಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ಹೇರಲಾಗಿದೆ. ಮೂರು ದಿನ ಭಕ್ತರ ವಾಸ್ತವಕ್ಕೆ ಮಲೆ ಮಹದೇಶ್ವರ ಪ್ರಾಧಿಕಾರ ನಿರ್ಬಂಧ ಹೇರಿದೆ. ಸಚಿವರು, ಶಾಸಕರು, ಅಧಿಕಾರಿಗಳಿಗೆ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಭಕ್ತರಲ್ಲಿ ಗೊಂದಲ ಮೂಡದೆ ಇರಲಿ ಎಂದು ಪ್ರಾಧಿಕಾರ ಪ್ರಕಟಣೆ ನೀಡಿದ್ದು, ಭಕ್ತರು ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.
ರಾಜ್ಯ ಸಚಿವ ಸಂಪುಟ ಸಭೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಸಭೆ ಮುಗಿದ ನಂತರ ಸಿಎಂ ಪೂರ್ಣಗೊಂಡ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಂಪುಟ ದರ್ಜೆಯ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಆಗಮಿಸಲಿರುವ ಹಿನ್ನೆಲೆಯಲ್ಲಿ ಏಪ್ರಿಲ್ 22 ರಿಂದ 24ರ ವರೆಗೆ ಮೂರು ದಿನಗಳ ಕಾಲ ಭಕ್ತಾದಿಗಳ ವಾಸ್ತವ್ಯಕ್ಕೆ ಪ್ರಾಧಿಕಾರದ ಕೊಠಡಿಗಳು ಲಭ್ಯವಿರುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ತಿಳಿಸಿದ್ದಾರೆ.