ಗುವಾಹಟಿ: ಅಸ್ಸಾಂ ರಾಜಧಾನಿ ಗುವಾಹಟಿಯ ಪಾಂಡು ಪ್ರದೇಶದಲ್ಲಿ 38 ವರ್ಷದ ಮಹಿಳೆಯೊಬ್ಬರು ಪತಿಯನ್ನು ಕೊಂದು ಶವವನ್ನು ಅವರ ನಿವಾಸದ ಆವರಣದಲ್ಲಿ ಹೂತು ಹಾಕಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿದೆ.
ಜೂನ್ 26 ರಂದು ನಡೆದ ಕೌಟುಂಬಿಕ ಕಲಹದ ನಂತರ ಈ ಘಟನೆ ನಡೆದಿದೆ. ರಹೀಮಾ ಖಾತುನ್ ಎಂದು ಗುರುತಿಸಲಾದ ಆರೋಪಿ ಜೋಯ್ಮೋತಿ ನಗರದಲ್ಲಿರುವ ತಮ್ಮ ಮನೆಯಲ್ಲಿ ನಡೆದ ಜಗಳದಲ್ಲಿ ತನ್ನ ಪತಿ ಸಬಿಯಾಲ್ ರೆಹಮಾನ್(40) ಅವರನ್ನು ಕೊಂದಿದ್ದಾಳೆ ಎಂದು ಆರೋಪಿಸಲಾಗಿದೆ. ಆರಂಭಿಕ ತನಿಖೆಗಳ ಪ್ರಕಾರ, ವೃತ್ತಿಯಲ್ಲಿ ಸ್ಕ್ರ್ಯಾಪ್ ವ್ಯಾಪಾರಿಯಾಗಿರುವ ರೆಹಮಾನ್, ಘಟನೆಯ ರಾತ್ರಿ ಕುಡಿದು ಮನೆಗೆ ಮರಳಿದ್ದು, ಹಿಂಸಾತ್ಮಕ ವಾಗ್ವಾದಕ್ಕೆ ಕಾರಣವಾಯಿತು.
ರಹಮಾನ್ ಸಾವಿನ ನಂತರ, ಖತುನ್ ತಮ್ಮ ,ಮನೆ ಜಾಗದಲ್ಲಿ ಐದು ಅಡಿ ಆಳದ ಗುಂಡಿಯನ್ನು ಅಗೆದು ದೇಹವನ್ನು ಹೂತು ಹಾಕಿದ್ದಾಳೆ. ಹಲವಾರು ದಿನಗಳವರೆಗೆ ತನ್ನ ಪತಿ ಕೆಲಸಕ್ಕಾಗಿ ಕೇರಳಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಿಕೊಂಡು ನೆರೆಹೊರೆಯವರು ಮತ್ತು ಪರಿಚಯಸ್ಥರನ್ನು ದಾರಿ ತಪ್ಪಿಸಿದ್ದಾಳೆ. ನಂತರ, ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿದ್ದಾಳೆ.
ಜುಲೈ 12 ರಂದು ಸಂತ್ರಸ್ತೆಯ ಸಹೋದರ ಜಲುಕ್ಬರಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದಾಗ ಸತ್ಯ ಬಯಲಾಗಿದೆ. ಮರುದಿನ, ಖಾತುನ್ ಪೊಲೀಸರನ್ನು ಸಂಪರ್ಕಿಸಿ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ. ಜಗಳದ ವೇಳೆ ಭಯಭೀತಳಾಗಿ ವರ್ತಿಸಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ಪಶ್ಚಿಮ ಗುವಾಹಟಿ ಉಪ ಪೊಲೀಸ್ ಆಯುಕ್ತ ಪದ್ಮನವ್ ಬರುವಾ ಅವರು, ಪೊಲೀಸ್ ತಂಡವು ವಿಧಿವಿಜ್ಞಾನ ತಜ್ಞರು ಮತ್ತು ಮ್ಯಾಜಿಸ್ಟ್ರೇಟ್ ಜೊತೆಗೆ, ನಿವಾಸದಿಂದ ಕೊಳೆತ ಅವಶೇಷಗಳನ್ನು ಹೊರತೆಗೆದಿದ್ದಾರೆ ಎಂದು ದೃಢಪಡಿಸಿದರು. ಖಾತುನ್ ಈ ಕೃತ್ಯವನ್ನು ಒಪ್ಪಿಕೊಂಡಿದ್ದರೂ, ಅವರು ಒಬ್ಬಂಟಿಯಾಗಿ ಕೃತ್ಯ ಎಸಗಿಲ್ಲದಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಯಾರ ಸಹಾಯವಿಲ್ಲದೆ ಒಬ್ಬಳೇ ದೊಡ್ಡ ಗುಂಡಿಯನ್ನು ಅಗೆದು ಶವವನ್ನು ಹೂಳಲು ಸಾಧ್ಯವಾಗಿರುವುದು ಅತ್ಯಂತ ಅಸಂಭವ. ಪ್ರಕರಣದಲ್ಲಿ ಹೆಚ್ಚುವರಿ ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಡಿಸಿಪಿ ಬರುವಾ ಹೇಳಿದ್ದಾರೆ.
ದಂಪತಿಗಳು ಸುಮಾರು 15 ವರ್ಷಗಳ ಕಾಲ ದಾಂಪತ್ಯ ನಡೆಸಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದರು. ಈ ಘಟನೆಯು ಸ್ಥಳೀಯ ಸಮುದಾಯವನ್ನು ಆಘಾತಗೊಳಿಸಿದೆ.