ಹಿಮಾಲಯ ರಾಜ್ಯದ ಕೆಲವು ಭಾಗಗಳಲ್ಲಿ ಧಾರಾಕಾರ ಮಳೆಯಿಂದಾಗಿ ಭೂಕುಸಿತಗಳು ಮತ್ತು ರಸ್ತೆ ತಡೆಗಳು ಉಂಟಾಗಿದ್ದರಿಂದ ಉತ್ತರ ಸಿಕ್ಕಿಂನಿಂದ 54 ಮಕ್ಕಳು ಸೇರಿದಂತೆ 500 ಮಂದಿ ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಿಸಿದೆ.
ಶುಕ್ರವಾರ ಲಾಚೆನ್, ಲಾಚುಂಗ್ ಮತ್ತು ಚುಂಗ್‌ಥಾಂಗ್‌ನಲ್ಲಿ ಭಾರೀ ಮಳೆಯಾಗಿದೆ. ಮಳೆಯ ಪರಿಣಾಮವಾಗಿ ಸುಮಾರು 500 ಪ್ರವಾಸಿಗರು, ಲಾಚುಂಗ್ ಮತ್ತು ಲಾಚೆನ್ ಕಣಿವೆಗೆ ಪ್ರಯಾಣಿಸುತ್ತಿದ್ದರು. ಮಾರ್ಗದಲ್ಲಿ ಭೂಕುಸಿತಗಳು ಮತ್ತು ರಸ್ತೆ ತಡೆಗಳಿಂದಾಗಿ ಚುಂಗ್‌ಥಾಂಗ್‌ನಲ್ಲಿ ಅವರು ಸಿಲುಕಿಕೊಂಡಿದ್ದರು.
ಎಸ್‌ಡಿಎಂ ಚುಂಗ್‌ಥಾಂಗ್‌ನ ಕೋರಿಕೆಯ ಮೇರೆಗೆ ತ್ರಿಶಕ್ತಿ ಕಾರ್ಪ್ಸ್, ಭಾರತೀಯ ಸೇನೆಯ ಪಡೆಗಳು ಕಾರ್ಯಾಚರಣೆಗಿಳಿದು ಸಿಲುಕಿಕೊಂಡಿದ್ದ ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸಿದವು.
“ರಕ್ಷಿಸಲ್ಪಟ್ಟ ಪ್ರವಾಸಿಗರಲ್ಲಿ 216 ಪುರುಷರು, 113 ಮಹಿಳೆಯರು ಮತ್ತು 54 ಮಕ್ಕಳು ಸೇರಿದ್ದಾರೆ. ಅವರನ್ನು ಮೂರು ವಿಭಿನ್ನ ಸೇನಾ ಶಿಬಿರಗಳಿಗೆ ಸ್ಥಳಾಂತರಿಸಲಾಯಿತು. ಅವರಿಗೆ ಬಿಸಿ ಊಟ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಒದಗಿಸಲಾಗಿದೆ” ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ರಕ್ಷಣಾ ಪಡೆಗಳ ತ್ವರಿತ ಪ್ರತಿಕ್ರಿಯೆಯಿಂದ ಅನಾಹುತ ತಪ್ಪಿಸಲಾಗಿದೆ. ಆದಷ್ಟು ಬೇಗ ವಾಹನಗಳ ಸಂಚಾರಕ್ಕೆ ರಸ್ತೆಗಳನ್ನು ತೆರವುಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ. ಪ್ರವಾಸಿಗರ ಮುಂದಿನ ಪ್ರಯಾಣಕ್ಕೆ ಮಾರ್ಗವನ್ನು ತೆರವುಗೊಳಿಸುವವರೆಗೆ ಎಲ್ಲಾ ಸಹಾಯವನ್ನು ಒದಗಿಸಲಾಗುವುದು ಎಂದು ತಿಳಿಸಲಾಗಿದೆ.