ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಕುರಿತಾಗಿ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಅಧ್ಯಕ್ಷತೆಯ ಏಕ ಸದಸ್ಯ ಆಯೋಗ ಗುರುವಾರ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದು, ಇದನ್ನು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ.
ಮಧ್ಯಂತರ ವರದಿಯ ಶಿಫಾರಸಿನಂತೆ ತಂತ್ರಜ್ಞಾನ ಬಳಸಿ ಮುಂದಿನ 40 ದಿನದೊಳಗೆ ಉಪ ಜಾತಿಗಳ ಸಮೀಕ್ಷೆ ನಡೆಸುವುದು. ಅದರ ಹೊಣೆಯನ್ನು ಹಾಲಿ ಇರುವ ಆಯೋಗಕ್ಕೆ ವಹಿಸುವುದಕ್ಕೂ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕಾನೂನು ಮತ್ತು ಸಂಸತಿಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಿದ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯ ಏಕ ಸದಸ್ಯ ಆಯೋಗ ನೀಡಿದ ಮಧ್ಯಂತರ ವರದಿಯನ್ನು ಸಂಪುಟ ಅಂಗೀಕರಿಸಿದೆ. ಸಮಿತಿ ಮಾಡಿರುವ ನಾಲ್ಕು ಪ್ರಮುಖ ಶಿಫಾರಸುಗಳ ಅನುಷ್ಠಾನಕ್ಕೆ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಉಪಜಾತಿಗಳ ವೈಜ್ಞಾನಿಕ ವರ್ಗೀಕರಣಕ್ಕೆ ಹೊಸದಾಗಿ ಸಮೀಕ್ಷೆ ನಡೆಸಬೇಕು. 40 ದಿನದೊಳಗೆ ಸಮೀಕ್ಷೆ ನಡೆಸಬಹುದು. ಸಮೀಕ್ಷೆಗೆ ಅಗತ್ಯ ಪ್ರಶ್ನಾವಳಿ ಸಿದ್ಧಪಡಿಸಬೇಕು. ತರಬೇತಿ ಸಂಪನ್ಮೂಲ ಕ್ರೋಢೀಕರಣಕ್ಕೆ ಉನ್ನತ ಸಮಿತಿ ರಚಿಸಬೇಕು. ಹೊಸ ಸಮೀಕ್ಷೆಯಿಂದ ಸಂಗ್ರಹಿಸುವ ದತ್ತಾಂಶದ ಆಧಾರದಲ್ಲಿ ನಿಗದಿಗೊಳಿಸುವ ಮಾನದಂಡಗಳಂತೆ ಉಪಜಾತಿ ವರ್ಗೀಕರಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.