ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಅನೈತಿಕ ಸಂಬಂಧ ಹೊಂದಿದ ಆರೋಪದ ಮೇಲೆ 32 ವರ್ಷದ ಮಹಿಳೆಯನ್ನು ಆಕೆಯ ಪತಿ ಮತ್ತು ಗ್ರಾಮಸ್ಥರು ಸಾರ್ವಜನಿಕವಾಗಿ ಥಳಿಸಿದ್ದಾರೆ.
ಶನಿವಾರ ಘಟನೆ ನಡೆದಿದೆ. ಮಹಿಳೆಗೆ ಗ್ರಾಮದ ರಫೀಕ್ ಜೊತೆಗೆ ಅಕ್ರಮ ಸಂಬಂಧವಿದೆ ಎಂದು ಆಕೆಯ ಪತಿ ಜಮೀಲ್ ಅಹಮದ್ ಆರೋಪಿಸಿದ್ದು, ನಾನು ಇಲ್ಲದ ವೇಳೆ ಮನೆಗೆ ಬಂದು ಹೋಗುತ್ತಿದ್ದ ಎಂದು ಗ್ರಾಮದ ಜಾಮೀಯಾ ಮಸೀದಿಗೆ ದೂರು ನೀಡಿದ್ದಾನೆ.
ದೂರಿನ ವಿಚಾರಣೆ ನಡೆಸಿದ ನಂತರ ಮಸೀದಿಯಿಂದ ಹೊರ ಬಂದಾಗ ಪತಿ ಹಾಗೂ ಗ್ರಾಮದ ಕೆಲವರು ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾರೆ ಎಂದು ಚನ್ನಗಿರಿ ಪೊಲೀಸ್ ಠಾಣೆಗೆ ಮಹಿಳೆ ಭಾನುವಾರ ದೂರು ನೀಡಿದ್ದು. ಗ್ರಾಮದ ನಯಾಜ್, ಮಹಮ್ಮದ್ ಗೌಸ್, ಚಾಂದ್ ಬಾಷಾ, ಇನಾಯತ್ ವುಲ್ಲಾ, ದಸ್ತಗಿರಿ ಸೇರಿ ಹಲವರನ್ನು ಬಂಧಿಸಲಾಗಿದೆ. ಹಲ್ಲೆಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.