ರಾಯಚೂರು: ಪ್ರೀತಿ ಮಾಡಿದ್ದಕ್ಕೆ ಅಪ್ರಾಪ್ತ ಪುತ್ರಿಯನ್ನು ಹತ್ಯೆಗೈದ ವ್ಯಕ್ತಿಯೊಬ್ಬ ಕೃಷ್ಣಾ ನದಿಗೆ ಶವ ಎಸೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಚಾರಣೆಗೆ ಪುತ್ರಿಯನ್ನು ಹಾಜರುಪಡಿಸಲು ನ್ಯಾಯಾಧೀಶರು ಹೇಳಿದ್ದರಿಂದ ಲಿಂಗಸುಗೂರಿನಲ್ಲಿ 7 ತಿಂಗಳ ಹಿಂದೆ ನಡೆದಿದ್ದ ಮರ್ಯಾದೆಗೇಡು ಹತ್ಯೆ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಪಕ್ಕದ ಮನೆಯ ಯುವಕನನ್ನು ಪ್ರೀತಿಸಿದ್ದ ಅಪ್ರಾಪ್ತ ಪುತ್ರಿಗೆ ಬುದ್ಧಿ ಹೇಳಿದರೂ ಕೇಳದ ಕಾರಣ ಕೋಪಗೊಂಡ ತಂದೆ ಲಕ್ಕಪ್ಪ ಮರ್ಯಾದೆಗೆ ಅಂಜಿ ಪುತ್ರಿ ಕೊಲೆ ಮಾಡಿ ಕೃಷ್ಣಾ ನದಿಗೆ ಶವ ಎಸೆದಿದ್ದಾನೆ. ಪ್ರಿಯಕರನ ವಿರುದ್ಧ ದಾಖಲಿಸಿದ್ದ ಪೋಕ್ಸೋ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿದ್ದು, ನ್ಯಾಯಾಧೀಶರು ಬಾಲಕಿಯನ್ನು ಹಾಜರುಪಡಿಸಲು ಸೂಚಿಸಿದ್ದಾರೆ. ಇದರಿಂದಾಗಿ ಬಹುತೇಕ ಮುಚ್ಚಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಪುತ್ರಿಯನ್ನು ಕೊಂದ ತಂದೆ ಲಕ್ಕಪ್ಪನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
17 ವರ್ಷದ ಬಾಲಕಿ ಹನುಮಂತ ಎಂಬುವನನ್ನು ಪ್ರೀತಿಸುತ್ತಿದ್ದಳು. ಬಾಲಕಿಯ ತಂದೆ ಪೋಕ್ಸೋ ಪ್ರಕರಣ ದಾಖಲಿಸಿ ಹನುಮಂತನನ್ನು ಜೈಲಿಗೆ ಕಳುಹಿಸಿದ್ದ. ಜಾಮೀನು ಪಡೆದು ಯುವಕ ಹನುಮಂತ ಹೊರಗೆ ಬಂದು ಬಾಲಕಿಯೊಂದಿಗೆ ಪ್ರೇಮ ಮುಂದುವರಿಸಿದ್ದ.
ಪುತ್ರಿಗೆ ಲಕ್ಕಪ್ಪ ಬುದ್ದಿವಾದ ಹೇಳಿದರೂ ಆಕೆ ಕೇಳಿರಲಿಲ್ಲ. ಸಿಟ್ಟಿನಿಂದ ಆಕೆಯನ್ನು ಕೊಂದ ಲಕ್ಕಪ್ಪ ಮೃತದೇಹವನ್ನು ನದಿಗೆ ಎಸೆದು ಪತ್ನಿಗೆ ವಿಷಯ ತಿಳಿಸಿ ಯಾರಿಗೂ ಹೇಳದಂತೆ ತಾಕೀತು ಮಾಡಿದ್ದ. ಈ ನಡುವೆ ನ್ಯಾಯಾಲಯದಲ್ಲಿ ಪೋಕ್ಸೋ ಪ್ರಕರಣದ ವಿಚಾರಣೆ ನಡೆದಿದೆ. ನ್ಯಾಯಾಧೀಶರು ಅಪ್ರಾಪ್ತೆಯನ್ನು ಹಾಜರುಪಡಿಸಲು ಸೂಚಿಸಿದರೂ ಎರಡು ಮೂರು ಬಾರಿ ನೆಪ ಹೇಳಿ ಲಕ್ಕಪ್ಪ ಕುಟುಂಬದವರು ತಪ್ಪಿಸಿಕೊಂಡಿದ್ದರು.
ಬಾಲಕಿಯನ್ನು ಹಾಜರುಪಡಿಸಲು ತಾಕೀತು ಮಾಡಿದಾಗ ನಾಪತ್ತೆ ಕತೆ ಕಟ್ಟಿದ್ದರು. ಕೋರ್ಟ್ ಪ್ರಕರಣ ದಾಖಲಿಸಲು ಸೂಚಿಸಿದಾಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ವೇಳೆ ಮರ್ಯಾದೆಗೇಡು ಹತ್ಯೆ ಪ್ರಕರಣ ಬಯಲಾಗಿದೆ.