ಬೆಂಗಳೂರು: ರೈತರ ಜಮೀನಿಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ಒಟ್ಟಿಗೆ ತಲುಪಿಸಲು ಕಂದಾಯ ಇಲಾಖೆ ಕ್ರಮ ಕೈಗೊಂಡಿದೆ.
ರೈತರು ಅರ್ಜಿ ಸಲ್ಲಿಸಿದರೆ ಪಹಣಿಯ ಜೊತೆಗೆ ಪೋಡಿ ನಕ್ಷೆ, ಆಕಾರ್ ಬಂದ್ ಮತ್ತು ಮ್ಯುಟೇಶನ್ ದಾಖಲೆ ಮುದ್ರಿಸಿ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು. ಪಹಣಿ ಪೋಡಿ ನಕ್ಷೆ ಆಕಾರ್ ಬಂದ್ ಮತ್ತು ಮ್ಯುಟೇಶನ್ ಗಳಿಗಾಗಿ ರೈತರು ವಿವಿಧ ಕಚೇರಿಗಳಿಗೆ ಅಲೆದಾಡಬೇಕಿದೆ. ಮಧ್ಯವರ್ತಿಗಳ ಹಾವಳಿ ಕೂ ಇದೆ. ಇದನ್ನು ತಡೆಯುವ ಉದ್ದೇಶದಿಂದ ಒಂದೇ ಪುಟದಲ್ಲಿ ನಾಲ್ಕು ದಾಖಲೆ ಮುದ್ರಿಸಿ ವಿತರಿಸಿ ರೈತರ ಸಮಯ, ಹಣ, ಶ್ರಮ ಉಳಿಸಲು ಹೊಸ ವ್ಯವಸ್ಥೆಯನ್ನು ಡಿಸೆಂಬರ್ ನಿಂದ ಜಾರಿಗೊಳಿಸಲು ಕಂದಾಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯದಲ್ಲಿನ ಎಲ್ಲಾ ನಾಡಕಚೇರಿ, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ 25 ರೂ.ನಲ್ಲಿ ಪಹಣಿ ಸಿಗುತ್ತಿದೆ. ಪೋಡಿ ನಕ್ಷೆಯನ್ನು ರೈತರು ಭೂ ದಾಖಲೆಗಳ ಹೆಚ್ಚುವರಿ ನಿರ್ದೇಶಕರ ಕಚೇರಿಯಿಂದ ಪಡೆಯಬೇಕಿದೆ. ಈ ಕಚೇರಿಗಳು ತಾಲೂಕು ಕೇಂದ್ರದಲ್ಲಿವೆ. ಭೂಮಿಯ ವಿಸ್ತೀರ್ಣ, ಬೆಳೆ, ಎ ಖರಾಬು, ಬಿ ಖರಾಬು ಇತರ ವಿವರ ಒಳಗೊಂಡ ಆಕಾರ್ ಬಂದ್ ದಾಖಲೆಯು ರೈತರಿಗೆ ಮುಖ್ಯವಾಗಿದ್ದು, ಇದನ್ನು ಪಡೆಯಲು ತಹಶೀಲ್ದಾರ್ ಕಚೇರಿಗೆ ಹೋಗಬೇಕಿದೆ. ಭೂಮಿಯ ಮೂಲ ಮಾಲೀಕರು, ವರ್ಗಾವಣೆ, ಹಸ್ತಾಂತರ ವಿವರ, ಮಾಲೀಕತ್ವ ಬದಲಾವಣೆ, ಇತರೆ ಮಾಹಿತಿಯುಳ್ಳ ಮ್ಯುಟೇಶನ್ ದಾಖಲೆ ಸಾಲ ಪಡೆಯಲು ಇಲ್ಲವೇ ಭೂಮಿ ಮಾರಾಟಕ್ಕೆ ಪ್ರಮುಖವಾಗಿದೆ. ಇದನ್ನು ಪಡೆದುಕೊಳ್ಳಲು ಉಪ ನೋಂದಣಾಧಿಕಾರಿ ಕಚೇರಿಗೆ ಹೋಗಬೇಕಿದೆ. ಹೀಗೆ ನಾಲ್ಕು ದಾಖಲೆಗಳಿಗಾಗಿ ನಾಲ್ಕು ಕಚೇರಿಗಳಿಗೆ ರೈತರು ಅಲೆದಾಡುವುದನ್ನು ತಪ್ಪಿಸಲು ಕಂದಾಯ ಇಲಾಖೆ ಪಹಣಿಯೊಂದಿಗೆ ಪೋಡಿ ನಕ್ಷೆ, ಆಕಾರ್ ಬಂದ್ ಮತ್ತು ಮ್ಯುಟೇಶನ್ ದಾಖಲೆಗಳನ್ನು ಒಟ್ಟಿಗೆ ವಿತರಿಸುವ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ.
