ಬೆಂಗಳೂರು: ಗೃಹಲಕ್ಷ್ಮಿಯರಿಗೆ ಮತ್ತಷ್ಟು ಆರ್ಥಿಕ ಶಕ್ತಿ ತುಂಬಲು ಸ್ತ್ರೀ ಶಕ್ತಿ ಸಹ ಸ್ವಸಹಾಯ ಸಂಘಗಳ ಮಾದರಿಯಲ್ಲಿ ಜಂಟಿ ಹೊಣೆಗಾರಿಕೆ ಗುಂಪುಗಳನ್ನು ರಚಿಸಲಾಗುವುದು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು, ಬ್ಯಾಂಕ್ ಪ್ರತಿನಿಧಿಗಳೊಂದಿಗೆ ಬುಧವಾರ ಪೂರ್ವಭಾವಿ ಸಭೆ ನಡೆಸಿದ ಸಚಿವರು ನಂತರ ಮಾತನಾಡಿದರು.
ಗೃಹಲಕ್ಷ್ಮಿ ಯೋಜನೆ ಜಾರಿಯಾದ ನಂತರ ಪ್ರತಿ ಫಲಾನುಭವಿ ಕುಟುಂಬದ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜನಪ್ರಿಯವಾಗಿದೆ. ಫಲಾನುಭವಿಗಳನ್ನು ಒಳಗೊಂಡ ಜಂಟಿ ಹೊಣೆಗಾರಿಕೆ ಗುಂಪುಗಳನ್ನು ರಚಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಶೀಘ್ರವೇ ಅಂತಿಮ ರೂಪುರೇಷೆ ಸಿದ್ದಪಡಿಸಲಾಗುವುದು. ಆರಂಭದಲ್ಲಿ ಪ್ರಾಯೋಗಿಕವಾಗಿ 500 ಗುಂಪು ರಚಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳು ಆರಂಭವಾಗಿ 50 ವರ್ಷಗಳಾಗಿದ್ದು, ಆಗಸ್ಟ್ 2ರಂದು ಸುವರ್ಣ ಮಹೋತ್ಸವ ಸಮಾರಂಭ ನಡೆದಿದೆ. ಈ ವೇಳೆಗೆ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಜಂಟಿ ಹೊಣೆಗಾರಿಕೆ ಗುಂಪುಗಳ ರಚನೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.