ಹರಿಯಾಣದ ಕರ್ನಾಲ್‌ನಲ್ಲಿ ನಡೆದ ಘಟನೆಯೊಂದು, ಮಾನವೀಯತೆ ಮತ್ತು ಸಮಯಪ್ರಜ್ಞೆಗೆ ಸಾಕ್ಷಿಯಾಗಿದೆ. ರಸ್ತೆ ಬದಿಯಲ್ಲಿ ಅಪಘಾತಕ್ಕೀಡಾಗಿ ಬಹುತೇಕ ಮೃತಪಟ್ಟಿದ್ದಾನೆ ಎಂದು ಭಾವಿಸಲಾಗಿದ್ದ ಯುವಕನಿಗೆ, ನರ್ಸಿಂಗ್ ಸೂಪರ್‌ವೈಸರ್ ಅಂಕಿತಾ ಮಾನ್ ಅವರು ಸಮಯಕ್ಕೆ ಸರಿಯಾಗಿ ಸಿಪಿಆರ್ (CPR – Cardiopulmonary Resuscitation) ನೀಡಿ ಜೀವ ಉಳಿಸಿದ್ದಾರೆ. ಈ ದೃಶ್ಯಾವಳಿಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಂಕಿತಾ ಅವರ ಸಾಹಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಮಂಗಳವಾರ ರಾತ್ರಿ, ಸೆಕ್ಟರ್ 6 ಗುರುದ್ವಾರದ ಸಮೀಪದಲ್ಲಿ ಈ ಘಟನೆ ನಡೆದಿದೆ. ತಮ್ಮ ಮಗುವಿಗೆ ಐಸ್‌ಕ್ರೀಂ ಖರೀದಿಸಲು ಹೊರಟಿದ್ದ ಅಂಕಿತಾ ಮಾನ್, ರಸ್ತೆ ಬದಿಯಲ್ಲಿ ಜನಸಂದಣಿ ಸೇರಿದ್ದನ್ನು ಗಮನಿಸಿದ್ದಾರೆ. ಅಲ್ಲಿ ಅಪಘಾತಕ್ಕೀಡಾಗಿ ಪ್ರಜ್ಞಾಹೀನನಾಗಿದ್ದ ಯುವಕನ ಸುತ್ತ ಜನ ಸೇರಿದ್ದರು. ನೋಡಿದವರೆಲ್ಲಾ ಆತ ಮೃತಪಟ್ಟಿದ್ದಾನೆಂದೇ ಭಾವಿಸಿದ್ದರು.
ಆದರೆ, ನರ್ಸ್ ಅಂಕಿತಾ ಮಾನ್ ಅವರು ಆತನ ನಾಡಿಮಿಡಿತವನ್ನು ಪರೀಕ್ಷಿಸಿದಾಗ, ಜೀವಂತಿಕೆಯ ಲಕ್ಷಣಗಳು ಕಂಡುಬಂದಿವೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಂಕಿತಾ, ಆ 25 ವರ್ಷದ ಯುವಕನಿಗೆ ಸಿಪಿಆರ್ ನೀಡಲು ಪ್ರಾರಂಭಿಸಿದರು. ಅಪಘಾತದ ನಂತರ ವಾಂತಿ ಮಾಡಿ ಉಸಿರುಗಟ್ಟಿದ ಕಾರಣಕ್ಕೆ ಆತ ಪ್ರಜ್ಞಾಹೀನನಾಗಿದ್ದ ಎಂದು ತಿಳಿದುಬಂದಿದೆ. ಅಂಕಿತಾ ಅವರ ಸಮಯೋಚಿತ ಚಿಕಿತ್ಸೆಯಿಂದ ಆ ಯುವಕ ಚೇತರಿಸಿಕೊಳ್ಳಲು ಪ್ರಾರಂಭಿಸಿದ.
ತಕ್ಷಣವೇ ಅಂಕಿತಾ ಅವರು ಪೊಲೀಸರೊಂದಿಗೆ ಸಮನ್ವಯ ಸಾಧಿಸಿ, ಯುವಕನನ್ನು ವಿರ್ಕ್ ಆಸ್ಪತ್ರೆಗೆ, ನಂತರ ಕಲ್ಪನಾ ಚಾವ್ಲಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲು ನೆರವಾದರು. ವೈದ್ಯರು, ಅಂಕಿತಾ ಅವರ ಸಮಯೋಚಿತ ಕ್ರಮವಿಲ್ಲದೆ ಆತ ಬದುಕುಳಿಯುವುದು ಅಸಾಧ್ಯವಾಗಿತ್ತು ಎಂದು ದೃಢಪಡಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಅಂಕಿತಾ ಅವರ ಈ ವೀರಾವೇಶದ ಕಾರ್ಯದ ವಿಡಿಯೋ ವೈರಲ್ ಆದ ನಂತರ, ಅವರಿಗೆ ನಗರದಾದ್ಯಂತ ಅಪಾರ ಪ್ರಶಂಸೆ ವ್ಯಕ್ತವಾಗಿದೆ. ನಿಜ ಜೀವನದ ಹೀರೋ ಆಗಿ ಹೊರಹೊಮ್ಮಿರುವ ಅಂಕಿತಾ ಮಾನ್, ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಜ್ಞಾನ ಮತ್ತು ಮಾನವೀಯತೆಯ ಮಹತ್ವವನ್ನು ಎತ್ತಿ ತೋರಿಸಿದ್ದಾರೆ.
#socialmedia
— लक्ष्मी यादव (@__laxmi_yadav) May 22, 2025
Real life heroine, सड़क पर CPR देकर बचाई जान | वीडियो वायरल #Haryana #Karnal #ViralVideo #CPR pic.twitter.com/KbK0tkWeG4