ಬೆಂಗಳೂರು: ಅಂಗನವಾಡಿ ಮಕ್ಕಳಿಗೆ ನೀಡುವ ಮೊಟ್ಟೆ ಖರೀದಿಯಲ್ಲಿ ಹಣ ಸಂಗ್ರಹಿಸಿದ ಆರೋಪದಡಿ ದೇವದುರ್ಗ ವಲಯದ ಮೇಲ್ವಿಚಾರಕಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಕಮಲಾಕ್ಷಿ ಅಮಾನತುಗೊಂಡವರು. ರಾಯಚೂರು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾಂಡ್ವೆ ರಾಹುಲ್ ತುಕಾರಾಮ್ ಅಮಾನತು ಆದೇಶ ಹೊರಡಿಸಿದ್ದಾರೆ.
ಕಮಲಾಕ್ಷಿ ವಿರುದ್ಧ ಆರೋಪಗಳ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಆಪಾದಿತರು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು 1958ರ ನಿಯಮ 58 ರನ್ವಯ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿದ್ದು, ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ದೇವದುರ್ಗ ವಲಯದ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಮಸರಕಲ್-ಬಿ ವಲಯದ ಅಂಗನವಾಡಿ ಕಾರ್ಯಕರ್ತೆಯರಿಂದ ಮೊಟ್ಟೆ ಹಣ ಸಂಗ್ರಹ ಮಾಡಲಾಗುತ್ತಿದೆ ಎಂದು ವಲಯ ಮೇಲ್ವಿಚರಕಿ ಕಾಮಾಕ್ಷಿ ವಿರುದ್ಧ ಆರೋಪ ಕೇಳಿಬಂದಿತ್ತು. ಈ ಕುರಿತು ಸ್ಪಷ್ಟೀಕರಣ ನೀಡುವಂತೆ ಮೇಲ್ವಿಚಾರಕಿ ಕಮಲಾಕ್ಷಿ ಅವರಿಗೆ ನೋಟಿಸ್ ನೀಡಲಾಗಿತ್ತು. ಮಾರ್ಗಸೂಚಿಯನ್ವಯ ಮೊಟ್ಟೆ ಹಣವು ಬಾಲವಿಕಾಸ ಸಲಹಾ ಸಮಿತಿಯ ಜಂಟಿ ಖಾತೆಗೆ ಜಮಾವಾಗಿರುತ್ತದೆ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೈಯಕ್ತಿಕ ಖಾತೆಗೆ ಜಮಾ ಆಗಿರುವುದಿಲ್ಲ ಎಂದು ತಿಳಿಸಿದ್ದರು. ಹಣ ಸಂಗ್ರಹದ ಬಗ್ಗೆ ಸೂಕ್ತ ಉತ್ತರ ನೀಡದ ಹಿನ್ನೆಲೆಯಲ್ಲಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ.