ʼಮಹಿಳಾ ದಿನಾಚರಣೆʼ ಯಂದು ಮರೆಯಲಾಗದ ಅನುಭವ: ಫುಡ್ ಡೆಲಿವರಿ ಮಹಿಳೆಗೆ ಅಪರಿಚಿತ ಮಹಿಳೆಯಿಂದ ಪ್ರೀತಿಯ ಉಡುಗೊರೆ !

ಬೆಂಗಳೂರು: ಮಹಿಳಾ ದಿನಾಚರಣೆಯಂದು ಫುಡ್ ಡೆಲಿವರಿ ಮಾಡುವ ಮಹಿಳೆಯೊಬ್ಬರಿಗೆ ಅಪರಿಚಿತ ಮಹಿಳೆಯಿಂದ ಸಿಕ್ಕ ಪ್ರೀತಿಯ ಉಡುಗೊರೆಯೊಂದು ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾಗಿದೆ. ಆಹಾರವನ್ನು ತಲುಪಿಸಲು ಅಪಾರ್ಟ್ಮೆಂಟ್ ಒಂದರ 12ನೇ ಮಹಡಿಗೆ ಹೋದ ಡೆಲಿವರಿ ಮಹಿಳೆಗೆ ಅಲ್ಲಿ ಸಿಕ್ಕ ಪ್ರೀತಿ, ಗೌರವ, ಮತ್ತು ಅಪೂರ್ವ ಉಡುಗೊರೆ ಜೀವನಪರ್ಯಂತ ನೆನಪಿಟ್ಟುಕೊಳ್ಳುವಂತಿದೆ.

ಫುಡ್ ಡೆಲಿವರಿ ಮಾಡುವ ಸುಭಾಷಿಣಿ ಹಾಸನ್ ಅವರು‌, ಶನಿವಾರ ಸಂಜೆ 12ನೇ ಮಹಡಿಗೆ ಆರ್ಡರ್ ತಲುಪಿಸಲು ಹೋದಾಗ ಅಲ್ಲಿನ ಮಹಿಳೆಯೊಬ್ಬರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಬಿಸಿಲಿನ ತಾಪಕ್ಕೆ ಬಳಲಿದ್ದ ಸುಭಾಷಿಣಿಯವರಿಗೆ ನೀರು ನೀಡಿ, ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಿದ್ದಾರೆ. ಅಷ್ಟೇ ಅಲ್ಲ ಸಿಹಿ ತಿನಿಸಿ, ಮಹಿಳಾ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ, ಅವರ ಕೆಲಸವನ್ನು ಶ್ಲಾಘಿಸಿ, 1500 ರೂಪಾಯಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

“ಮೊದಲ ಬಾರಿಗೆ ಮಹಿಳಾ ಫುಡ್ ಡೆಲಿವರಿ ಸಿಬ್ಬಂದಿಯನ್ನು ನೋಡಿದೆ. ಅದರಲ್ಲೂ ಮಹಿಳಾ ದಿನಾಚರಣೆಯಂದು ನಿಮ್ಮಂತಹ ಧೈರ್ಯಶಾಲಿ ಮಹಿಳೆಯನ್ನು ನೋಡಿದ್ದು ನನಗೆ ತುಂಬಾ ಖುಷಿ ನೀಡಿತು” ಎಂದು ಆ ಮಹಿಳೆ ಹೇಳಿದ್ದಾರೆ.

ಈ ಘಟನೆಯಿಂದ ಭಾವನಾತ್ಮಕವಾಗಿ ಬೆಸೆದ ಸುಭಾಷಿಣಿ ಹಾಸನ್ ಅವರು, ಕೃತಜ್ಞತೆ ಸಲ್ಲಿಸಿ, ಆಕೆಯ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಅಲ್ಲದೆ, ಇಂತಹ ಪ್ರೀತಿ, ಗೌರವ ಮತ್ತು ಉಡುಗೊರೆ ತನ್ನ ಮೂರು ವರ್ಷಗಳ ಫುಡ್ ಡೆಲಿವರಿ ಅನುಭವದಲ್ಲಿ ಅತ್ಯಮೂಲ್ಯವಾದದ್ದು ಎಂದು ಮನಪೂರ್ವಕವಾಗಿ ತಿಳಿಸಿದ್ದಾರೆ.

ಈ ಘಟನೆಯು ಮಾನವೀಯತೆಯ ಮಹತ್ವವನ್ನು ಎತ್ತಿ ತೋರಿಸುತ್ತಿದ್ದು. ಅಪರಿಚಿತರ ನಡುವೆಯೂ ಪ್ರೀತಿ ಮತ್ತು ಗೌರವವನ್ನು ಹಂಚಿಕೊಳ್ಳಬಹುದು ಎಂಬುದನ್ನು ನಿರೂಪಿಸಿದೆ. ಸುಭಾಷಿಣಿಯವರ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read