ಮಗನ ಕೊಂದ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡು ಪೊಲೀಸರಿಗೆ ಶರಣಾದ ತಾಯಿ

ತನ್ನ ಮಗನನ್ನು ಕುತ್ತಿಗೆ ಸೀಳಿ ಕೊಂದ ವ್ಯಕ್ತಿಯನ್ನು ಕೊಲ್ಲುವ ಮೂಲಕ ಮಹಿಳೆಯೊಬ್ಬಳು ಪುತ್ರನ ಸಾವಿಗೆ ಸೇಡು ತೀರಿಸಿಕೊಂಡ ಘಟನೆ ಆಂಧ್ರ ಪ್ರದೇಶದಲ್ಲಿ ಜರುಗಿದೆ.

ಒಂದೂವರೆ ವರ್ಷದ ಹಿಂದೆ ತನ್ನ ಮಗನನ್ನು ಕೊಂದಿದ್ದ ಈತನ ವಿರುದ್ಧ ಸೇಡು ತೀರಿಸಿಕೊಂಡ ಮಹಿಳೆ ಬುಧವಾರ ಬೆಳಿಗ್ಗೆ ಪೊಲೀಸರಿಗೆ ಶರಣಾಗತಳಾಗಿದ್ದಾಳೆ.

ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯ ನರಸರಾವ್‌ ಪೇಟೆಯಲ್ಲಿ ವಾಸಿಸುವ ಜಾನ್ ಬೀ ಹೆಸರಿನ ಈ ಮಹಿಳೆ ತನ್ನ ಮಕ್ಕಳೊಂದಿಗೆ ದಿನಗೂಲಿ ಕೆಲಸ ಮಾಡುತ್ತಿದ್ದರು. ಈಕೆಯ ಪತಿ ಶಬ್ಬೀರ್‌ 15 ವರ್ಷಗಳ ಹಿಂದೆ ತೀರಿಕೊಂಡಿದ್ದರು.

ಸ್ಥಳೀಯ ರೌಡಿಶೀಟರ್‌ ಶೇಯ್ಖ್‌ ಬಾಜಿ (36) ಜೊತೆಗೆ ಜಾನ್‌ಬೀ ಸಂಬಂಧ ಇಟ್ಟುಕೊಂಡಿದ್ದಳು. ಈ ಸಂಬಂಧದ ಕುರಿತು ಅರಿತುಕೊಂಡ ಆಕೆಯ ಹಿರಿಯ ಪುತ್ರ ಶೇಯ್ಖ್‌ ಬಾಜಿಗೆ ತನ್ನ ಮನೆಗೆ ಬರಬೇಡ ಎಂದು ಎಚ್ಚರಿಕೆ ಕೊಟ್ಟಿದ್ದಾನೆ. ಇದರಿಂದ ಸಿಟ್ಟುಗೊಂಡ ಶೇಯ್ಖ್ ತನ್ನ ಮೂವರು ಸ್ನೇಹಿತರ ನೆರವಿನಿಂದ ಆಗಸ್ಟ್ 2021ರಲ್ಲಿ ಆತನ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ.

ಇದಾದ ನಾಲ್ಕು ತಿಂಗಳಲ್ಲಿ, ಡಿಸೆಂಬರ್‌ 2021ರಲ್ಲಿ, ತನ್ನ ಸಹೋದರ ಹುಸೇನ್ ಹಾಗೂ ಕಿರಿಯ ಪುತ್ರನೊಂದಿಗೆ ಸೇರಿ ಕೊಲೆ ಪ್ರಮುಖ ಆರೋಪಿ ಕಸಮ್‌ನ್ನು, ಆತನ ಕುಡಿದ ಮತ್ತಿನಲ್ಲಿದ್ದ ವೇಳೆ, ಪಟ್ಟಣದ ಸಿನೆಮಾ ಹಾಲ್ ಜಂಕ್ಷನ್‌ನಲ್ಲಿ ಬಳಿ ಕೊಲೆ ಮಾಡಿದ್ದಾಳೆ. ಕೂಡಲೇ ಪೊಲೀಸರಿಗೆ ಶರಣಾದ ಈಕೆ ಕೆಲ ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದಿದ್ದಾಳೆ. ಆಗ ಬಾಜಿಯನ್ನು ಕೊಲ್ಲಲು ಸ್ಕೆಚ್‌ ರೂಪಿಸಿದ್ದಾಳೆ.

ತನ್ನನ್ನು ಕೊಲ್ಲಲು ಜಾನ್‌ ಬೀ ಶಪಥಗೈದಿದ್ದಾಳೆ ಎಂದು ಅರಿತ ಬಾಜಿ ಒಂದೂವರೆ ವರ್ಷದಿಂದ ಅನಾಮಧೇಯ ಜೀವನ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

ಜೈಲಿನಿಂದ ಹೊರ ಬರುತ್ತಲೇ ತನ್ನ ಸ್ನೇಹಿತರ ನೆರವಿನಿಂದ ಬಾಜಿಯ ದೂರವಾಣಿ ಸಂಖ್ಯೆ ಪಡೆದಿದ್ದಾಳೆ ಜಾನ್ ಬೀ. ತಾನು ಹಳೆಯ ದ್ವೇಷವನ್ನು ಮರೆತಿದ್ದು, ತನ್ನೊಂದಿಗೆ ಲಿವಿನ್ ಸಂಬಂಧದಲ್ಲಿರಲು ಬಯಸುವುದಾಗಿ ಹೇಳಿ ಬಾಜಿಯನ್ನು ನಂಬಿಸಿದ್ದಾಳೆ ಜಾನ್‌ಬೀ.

ಮಂಗಳವಾರ ರಾತ್ರಿ ತನ್ನ ಸಹೋದರನ ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನಿಸಿದ ಜಾನ್‌ ಬೀ, ಅಲ್ಲಿ ಆತನನ್ನು ತನ್ನ ಸಹೋದರ ಹುಸೇನ್ ಹಾಗೂ ಆತನ ಸ್ನೇಹಿತರಾದ ಗೋಪಾಲಕೃಷ್ಣ ಹಾಗೂ ಹರೀಶ್‌ ಜೊತೆಗೆ ಸೇರಿ ಕೊಲ್ಲಲು ಸಂಚು ರೂಪಿಸಿದ್ದಾಳೆ.

ಪಾರ್ಟಿ ವೇಳೆ ಚೆನ್ನಾಗಿ ಕುಡಿದು ಚಿತ್‌ ಆದ ಬಾಜಿಯನ್ನು ಈ ನಾಲ್ವರು ಸೇರಿಕೊಂಡು ಚಾಕುವಿನಿಂದ ಹಲ್ಲೆಗೈದು ಕೊಂದಿದ್ದಾರೆ. ಪೆಟ್ರೋಲ್ ಸುರಿದು ದೇಹವನ್ನು ಸುಟ್ಟು ಹಾಕಲು ನೋಡಿದ್ದಾರೆ. ದೇಹವು ಅರ್ಧ ಸುಟ್ಟ ಕೂಡಲೇ ಅದನ್ನು ಅಲ್ಲಿಯೇ ಹೂತು ಹಾಕಲು ನೋಡಿದ್ದಾರೆ. ಕೊಲೆಯ ಕುರಿತು ಪೊಲೀಸರಿಗೆ ತಾವೇ ಹೋಗಿ ಠಾಣೆಯಲ್ಲಿ ತಿಳಿಸಿದ ಇವರು ಅಲ್ಲಿಯೇ ಶರಣಾಗತರಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read