ಬೆಂಗಳೂರು: ಶಾಲಾ ಮಕ್ಕಳಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಆನ್ಲೈನ್ ಹಾಜರಾತಿಗೆ ಶಾಲಾ ಶಿಕ್ಷಣ ಇಲಾಖೆ ಸಿದ್ಧತೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಇಲಾಖೆಯ ಸಿಬ್ಬಂದಿಗೂ ಆನ್ಲೈನ್ ಹಾಜರಾತಿಗೆ ಆದೇಶ ಹೊರಡಿಸಲಾಗಿದೆ.
ಈ ಕೂಡಲೇ ಆಧಾರ್ ಸಂಖ್ಯೆ ಅಪ್ಡೇಟ್ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ತಿಂಗಳ ವೇತನ ಪಾವತಿಸುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಇಲಾಖೆಯ ಜಂಟಿ ನಿರ್ದೇಶಕ ವಿಜಯ ರವಿಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಹಾಜರಾತಿ ನಿರ್ವಹಣೆ ವ್ಯವಸ್ಥೆಯಲ್ಲಿ ಅನುಸರಿಸಲಾಗುತ್ತಿರುವ ರಿಜಿಸ್ಟರ್ ಆಧಾರಿತ ದಾಖಲಾತಿ ಮತ್ತು ಹಸ್ತ ಚಾಲಿತ ಸಹಿ ಒಳಗೊಂಡ ಹಾಜರಾತಿ ಸೆರೆಹಿಡಿಯುವ ಸಾಂಪ್ರದಾಯಿಕ ವಿಧಾನಗಳ ದೃಢೀಕರಣದ ಸವಾಲುಗಳನ್ನು ಬಗೆಹರಿಸಬೇಕಿದೆ.
ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ ಎನ್ನುವ ಮೊಬೈಲ್ ಅಪ್ಲಿಕೇಶನ್ ಅನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶವು ಕೃತಕ ಬುದ್ಧಿ ಮತ್ತೆ ಆಧಾರಿತ ಭೌಗೋಳಿಕ ಮಾಹಿತಿ ವ್ಯವಸ್ಥೆ ಆಧಾರಿತ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ.
ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ ವಿಸ್ತರಿಸಲು ನೌಕರರ ಆಧಾರ್ ಮಾಹಿತಿ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಸರ್ವಿಸ್ ರಿಜಿಸ್ಟರ್ ನಲ್ಲಿ ಆಧಾರ್ ಅಪ್ಡೇಟ್ ಅಥವಾ ಅಪ್ಡೇಟ್ ಮಾಡದ ಬಗ್ಗೆ ನೌಕರರ ಮಾಹಿತಿ ಪರಿಶೀಲಿಸಬೇಕು. ನೌಕರರ ಆಧಾರ್ ಮಾಹಿತಿ ನಮೂದಿಸದಿದ್ದಲ್ಲಿ ಸರ್ವಿಸ್ ರಿಜಿಸ್ಟರ್ ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಒಂದು ವೇಳೆ ಆಧಾರ್ ನಂಬರ್ ನಮೂದಿಸದ ಅಧಿಕಾರಿಗಳು, ನೌಕರರ ಮುಂದಿನ ತಿಂಗಳ ವೇತನವನ್ನು ಜನರೇಟ್ ಮಾಡುವುದಿಲ್ಲ ಎಂದು ಹೇಳಲಾಗಿದೆ.