ಬೆಂಗಳೂರು: ಚಿನ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಐಶ್ವರ್ಯಾ ಗೌಡ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ-ಇಡಿ ಅಧಿಕಾರಿಗಳು ಎರಡು ದಿನಗಳ ಹಿಂದೆ ದಾಳಿ ನಡೆಸಿದ್ದು, ಈ ವೇಳೆ ಬರೋಬ್ಬರಿ 2.25 ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿದೆ.
ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಎಂದು ಹೇಳಿಕೊಂಡು ಐಶ್ವರ್ಯಾ ಗೌಡ ವಂಚನೆ ಎಸಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಇಡಿ ಅಧಿಕಾರಿಗಳು ತನಿಖೆಯ ಮುಂದುವರೆದ ಭಾಗವಾಗಿ ಐಶ್ವರ್ಯಾ ಗೌಡ ನಿವಾಸ, ಶಿಲ್ಪಾ ಗೌಡ ನಿವಾಸ, ಶಾಸಕ ವಿನಯ್ ಕುಲಕರ್ಣಿ ನಿವಾಸ ಸೇರಿದಂತೆ ಒಟ್ಟು 14 ಕಡೆ ದಾಳಿ ನಡೆಸಿದ್ದರು.
ಈ ವೇಳೆ ಐಶ್ವರ್ಯ ಗೌಡ ನಿವಾಸದಲ್ಲಿ 2.25 ಕೋಟಿ ಹಣ ಪತ್ತೆಯಾಗಿದೆ. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಒಂದಿಷ್ಟು ಮಹತ್ವದ ದಾಖಲೆಗಳು ಕೂಡ ಲಭ್ಯವಾಗಿವೆ ಎಂದು ಇಡಿ ಮಾಹಿತಿ ನೀಡಿದೆ.