ವಾಹನ ಸವಾರರೇ ಗಮನಿಸಿ: ಇನ್ನು ಹೆದ್ದಾರಿಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಮೇಲೆ ಎಐ ಕ್ಯಾಮೆರಾ ಕಣ್ಗಾವಲು: ಸಾರಿಗೆ ಇಲಾಖೆಯಿಂದಲೂ ದಂಡಾಸ್ತ್ರ ಪ್ರಯೋಗ

ಬೆಂಗಳೂರು: ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ವಾಹನಗಳ ಅತಿ ವೇಗ, ಸಂಚಾರ ನಿಯಮ ಉಲ್ಲಂಘನೆಯ ಮೇಲೆ ಪೊಲೀಸ್ ಇಲಾಖೆ ರೀತಿಯಲ್ಲಿ ಸಾರಿಗೆ ಇಲಾಖೆಯಿಂದ ಕ್ಯಾಮೆರಾ ಕಣ್ಗಾವಲು ಇಡಲಿದ್ದು, ದಂಡಾಸ್ತ್ರ ಪ್ರಯೋಗಿಸಲು ಮುಂದಾಗಿದೆ.

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸವಾರರ ನಿಯಮ ಉಲ್ಲಂಘನೆ ಪ್ರಕರಣಗಳು ಮಿತಿಮೀರಿವೆ. ಅತಿಯಾದ ವೇಗ, ಸುರಕ್ಷತಾ ನಿಯಮಗಳ ನಿರ್ಲಕ್ಷ್ಯದಿಂದ ಅಪಘಾತಗಳು ಹೆಚ್ಚಾಗಿ ಸಾವು, ನೋವು ಸಂಭವಿಸುತ್ತಿವೆ. ಸಾರಿಗೆ ಇಲಾಖೆ ಅಪಘಾತಗಳ ಪ್ರಮಾಣ ತಗ್ಗಿಸಲು, ವಾಹನ ಸವಾರರ ಸುರಕ್ಷತೆಗಾಗಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಮೇಲೆ ಹದ್ದಿನ ಕಣ್ಣು ಇಟ್ಟಿದೆ.

ಎಲ್ಲೆಡೆ ಎಐ ತಂತ್ರಜ್ಞಾನದ ಎ.ಎನ್.ಪಿ.ಆರ್. ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ವಾಹನಗಳ ವೇಗದ ವಿವರದ ಪ್ರದರ್ಶನಕ್ಕೆ ಡಿಜಿಟಲ್ ಡಿಸ್ ಪ್ಲೇ ಬೋರ್ಡ್ ವ್ಯವಸ್ಥೆ ಮಾಡಲಾಗಿದ್ದು, ಕ್ಯಾಮೆರಾಗಳ ನಡುವೆ ಇದು ಸಂಪರ್ಕ ಹೊಂದಿರುತ್ತದೆ. ಕ್ಯಾಮೆರಾಗಳು ವಾಹನಗಳ ವೇಗ, ಪಥ ಶಿಸ್ತು ಉಲ್ಲಂಘನೆ, ಚಾಲನೆಯ ವೇಳೆ ಮೊಬೈಲ್ ಬಳಕೆ, ಸೀಟ್ ಬೆಲ್ಟ್ ಧರಿಸದಿರುವುದು, ಸೇರಿ ಸಂಚಾರ ನಿಯಮ ಉಲ್ಲಂಘನೆಯ ದೃಶ್ಯಗಳನ್ನು ವಾಹನದ ನೋಂದಣಿ ಸಂಖ್ಯೆಯ ಸಹಿತ ಸೆರೆಹಿಡಿಯಲಿದೆ. ನಿಯಮ ಉಲ್ಲಂಘಿಸುವವರಿಗೆ ಕಮಾಂಡ್ ಸೆಂಟರ್ ನಿಂದ ನೇರವಾಗಿ ನೋಟಿಸ್ ನೀಡಲಾಗುವುದು.

ವಾಹನ ಸಂಚಾರ ಮತ್ತು ಅಪಘಾತ ಪ್ರಮಾಣ ಹೆಚ್ಚಾಗಿರುವ ಹೆದ್ದಾರಿಗಳನ್ನು ಆಯ್ಕೆ ಮಾಡಿಕೊಂಡು ಸಾರಿಗೆ ಇಲಾಖೆ ಎಐ ತಂತ್ರಜ್ಞಾನ ಆಧರಿಸಿದ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ಕ್ಯಾಮೆರಾಗಳನ್ನು ಅಳವಡಿಸಿದೆ.

ರಾಜ್ಯದ 7 ಹೆದ್ದಾರಿಗಳಲ್ಲಿ ಎಐ ತಂತ್ರಜ್ಞಾನದ ಎ.ಎನ್.ಪಿ.ಆರ್. ಕ್ಯಾಮೆರಾಗಳನ್ನು ಅಳವಡಿಸಿದ್ದು, ಮುಂದಿನ ಆರು ತಿಂಗಳಲ್ಲಿ ಇತರೆ ಹೆದ್ದಾರಿಗಳಲ್ಲಿಯೂ ಇಂತಹ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.

ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ವೇ, ಹೊಸೂರು ರಸ್ತೆಯ ಅತ್ತಿಬೆಲೆ, ಎನ್.ಹೆಚ್. 7ರ ದೇವನಹಳ್ಳಿ ಟೋಲ್, ರಾಷ್ಟ್ರೀಯ ಹೆದ್ದಾರಿ 4ರ ಪಾರ್ಲೆಜಿ ಫ್ಯಾಕ್ಟರಿ ಬಳಿ, ತುಮಕೂರಿನ ಕ್ಯಾತ್ಸಂದ್ರ, ರಾಷ್ಟ್ರೀಯ ಹೆದ್ದಾರಿ 73ರ ಹಿಟ್ನಾಳ ಟೋಲ್ ಗೇಟ್ ಬಳಿ ಕ್ಯಾಮೆರಾ ಕಣ್ಗಾವಲು ಹಾಕಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read