ವೈಎಸ್‌ಆರ್ ತೆಲಂಗಾಣ ಪಕ್ಷದ ನಾಯಕಿ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ಅವರು ಹೈದರಾಬಾದ್ ನಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ನಂತರ ಅವರನ್ನು ವಶಕ್ಕೆ ಪಡೆಯಲಾಗಿದೆ.
ತೆಲಂಗಾಣ ರಾಜ್ಯ ಸರ್ಕಾರ ನಡೆಸಿದ ನೇಮಕಾತಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಚೇರಿಗೆ ತೆರಳುತ್ತಿದ್ದಾಗ ಶರ್ಮಿಳಾ ಅವರನ್ನು ಪೊಲೀಸರು ತಡೆದರು.
ಶರ್ಮಿಳಾ ಅವರ ಕಾರು ಎಸ್‌ಐಟಿ ಕಚೇರಿಗೆ ಸಮೀಪಿಸುತ್ತಿದ್ದಂತೆ ತಡೆಯಲು ಪೊಲೀಸ್ ಸಿಬ್ಬಂದಿ ಪ್ರಯತ್ನಿಸಿದ್ದಾರೆ. ಈ ವೇಳೆ ನಡೆದ ವಾದ- ವಿವಾದದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ನಂತರ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಶರ್ಮಿಳಾ ಪೊಲೀಸರಿಗೆ ಕಪಾಳ ಮೋಕ್ಷ ಮಾಡಿದ ನಂತರ ಅವರ ತಾಯಿ ವಿಜಯಮ್ಮ ಸಹ ಇದೇ ರೀತಿ ವರ್ತಿಸಿದ್ದಾರೆ. ಪೊಲೀಸರು ವಶಕ್ಕೆ ಪಡೆದಿದ್ದ ಶರ್ಮಿಳಾ ಅವರನ್ನು ಭೇಟಿ ಮಾಡಲು ವಿಜಯಮ್ಮ ಹೈದರಾಬಾದ್‌ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ನಡೆದ ವಾಗ್ವಾದದಲ್ಲಿ ವಿಜಯಮ್ಮ ಪೊಲೀಸರನ್ನ ನೂಕಿ, ತಳ್ಳಾಡಿದ್ದಾರೆ.
ತೆಲಂಗಾಣ ರಾಜ್ಯ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ನೇಮಕಾತಿ ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಆರೋಪದ ಮೇಲೆ ತೆಲಂಗಾಣ ವ್ಯಾಪಕ ಪ್ರತಿಭಟನೆಗೆ ಸಾಕ್ಷಿಯಾಗಿದೆ. ಆರೋಪಗಳು ಮುನ್ನೆಲೆಗೆ ಬಂದಾಗಿನಿಂದ ಕನಿಷ್ಠ 11 ಜನರನ್ನು ಬಂಧಿಸಲಾಗಿದೆ ಮತ್ತು ಸರ್ಕಾರಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮೂರು ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ.
ಸೋರಿಕೆ ಆರೋಪದ ಬಗ್ಗೆ ವಿರೋಧ ಪಕ್ಷಗಳು ಕೆ ಚಂದ್ರಶೇಖರ ರಾವ್ ಸರ್ಕಾರವನ್ನು ಗುರಿಯಾಗಿಸಿಕೊಂಡಿವೆ. ತೆಲಂಗಾಣದಲ್ಲಿ ಸ್ವತಂತ್ರ ರಾಜಕೀಯ ಗುರುತನ್ನು ರೂಪಿಸಲು ಶ್ರಮಿಸುತ್ತಿರುವ ಶರ್ಮಿಳಾ ಅವರು ನಿರಂತರವಾಗಿ ಪತ್ರಿಕೆ ಸೋರಿಕೆ ವಿಷಯವನ್ನು ಅಸ್ತ್ರನ್ನಾಗಿಸಿಕೊಂಡಿದ್ದಾರೆ. ಕಳೆದ ತಿಂಗಳು, ಈ ವಿಷಯದ ಬಗ್ಗೆ ಹೈದರಾಬಾದ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರನ್ನು ಬಂಧಿಸಲಾಗಿತ್ತು.
https://twitter.com/ANI/status/1650424915110277120?ref_src=twsrc%5Etfw%7Ctwcamp%5Etweetembed%7Ctwterm%5E1650424915110277120%7Ctwgr%5Eb693e77441b08f68b9d7c8aac64280254105efa5%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fdeccanherald-epaper-dh881cfe1ab97d482fb3abb8994f502a8b%2Faftersharmilahermothervijayammatooslapscop-newsid-n493236674