ನಟಿ ರಾಖಿ ಸಾವಂತ್ ಮದುವೆಯಾಗಲು ಸಿದ್ಧರಾಗಿದ್ದು, ಪಾಕಿಸ್ತಾನಿ ನಟ ದೋದಿ ಖಾನ್ ಇತ್ತೀಚೆಗೆ ರಾಖಿಗೆ ಮದುವೆಯ ಪ್ರಸ್ತಾಪ ಮಾಡಿದ್ದರು. ಆದರೆ ಕೆಲವು ದಿನಗಳ ನಂತರ ಅವರು ತಮ್ಮ ಪ್ರಸ್ತಾಪವನ್ನು ಹಿಂತೆಗೆದುಕೊಂಡಿದ್ದು, ಇದರಿಂದ ರಾಖಿ ಸಾವಂತ್ ನಿರಾಸೆಗೊಂಡಿದ್ದರು. ಇದೀಗ ಪಾಕಿಸ್ತಾನದ ಇಸ್ಲಾಮಿಕ್ ಧರ್ಮಗುರು ಮುಫ್ತಿ ಅಬ್ದುಲ್ ಖಾವಿ, ರಾಖಿಗೆ ಮದುವೆಯ ಪ್ರಸ್ತಾಪ ಮಾಡಿದ್ದಾರೆ.
ಮುಫ್ತಿ ಅಬ್ದುಲ್ ಖಾವಿ ರಾಖಿಯನ್ನು ‘ಗೌರವಾನ್ವಿತ ಮಹಿಳೆ’ ಎಂದು ಕರೆದಿದ್ದಾರೆ. ರಾಖಿ ಉಮ್ರಾ ಯಾತ್ರೆಗೆ ತೆರಳಿದ್ದನ್ನು ಶ್ಲಾಘಿಸಿದ್ದಾರೆ. ಪಾಕಿಸ್ತಾನಿ ವಿದ್ವಾಂಸರನ್ನು ಮದುವೆಯಾಗುವ ರಾಖಿಯ ಆಸಕ್ತಿಯ ಬಗ್ಗೆ ಮಾತನಾಡಿದ ಖಾವಿ ಒಂದು ಕಂಡೀಷನ್ ಹಾಕಿದ್ದಾರೆ. ಅವರ ತಾಯಿ ಅನುಮತಿ ನೀಡಿದರೆ ಮಾತ್ರ ಮದುವೆಯಾಗುವುದಾಗಿ ಹೇಳಿದ್ದಾರೆ.
“ನಾನು ಸಿದ್ಧನಿದ್ದೇನೆ, ಆದರೆ ಒಂದು ಕಂಡೀಷನ್ ಇದೆ: ನಾನು ಮೊದಲು ನನ್ನ ತಾಯಿಯ ಅನುಮತಿ ಪಡೆಯುತ್ತೇನೆ. ಅವರು ಅನುಮತಿ ನೀಡಿದರೆ ನಾನು ರಾಖಿಯನ್ನು ಮದುವೆಯಾಗುತ್ತೇನೆ” ಎಂದು ಖಾವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಈ ಹಿಂದೆ ಡೋಡಿ ಖಾನ್ ರಾಖಿಗೆ ಪ್ರಪೋಸ್ ಮಾಡಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದ ಡೋಡಿ ಖಾನ್, “ನಾನು ರಾಖಿಯನ್ನು ಚೆನ್ನಾಗಿ ಬಲ್ಲೆ. ಅವರು ದೇವರೆಂದರೆ ಬಹಳ ಭಕ್ತಿಯುಳ್ಳವರು. ಅವರ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ, ಉಮ್ರಾಗೆ ಹೋಗಿದ್ದಾರೆ, ತಮ್ಮ ಹೆಸರನ್ನು ಫಾತಿಮಾ ಎಂದು ಬದಲಾಯಿಸಿಕೊಂಡಿದ್ದಾರೆ. ನನಗೆ ಅದು ತುಂಬಾ ಇಷ್ಟವಾಯಿತು, ಅದಕ್ಕಾಗಿಯೇ ಪ್ರಪೋಸ್ ಮಾಡಿದೆ” ಎಂದಿದ್ದರು.
ಬಳಿಕ ಇನ್ನೊಂದು ಪೋಸ್ಟ್ ಹಾಕಿ “ಇದು ಜನರಿಗೆ ಇಷ್ಟವಾಗುತ್ತಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನನಗೆ ಸಾಕಷ್ಟು ಸಂದೇಶ ಮತ್ತು ವೀಡಿಯೊಗಳು ಬಂದಿವೆ. ರಾಖಿ ಜೀ, ನೀವು ನನ್ನ ಒಳ್ಳೆಯ ಸ್ನೇಹಿತೆ, ಮತ್ತು ಯಾವಾಗಲೂ ಇರುತ್ತೀರಿ. ನೀವು ನನ್ನ ವಧುವಾಗಲು ಸಾಧ್ಯವಾಗದಿರಬಹುದು, ಆದರೆ ನೀವು ಪಾಕಿಸ್ತಾನದ ಸೊಸೆಯಾಗುತ್ತೀರಿ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನನ್ನ ಸಹೋದರರಲ್ಲಿ ಒಬ್ಬರನ್ನು ನಿಮಗೆ ಮದುವೆ ಮಾಡುತ್ತೇನೆ” ಎಂದು ಡೋಡಿ ಖಾನ್ ಹೇಳಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ್ದ ರಾಖಿ, ಬೇಸರ ವ್ಯಕ್ತಪಡಿಸಿದ್ದರು.