ಬೆಂಗಳೂರು: ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ 15,000 ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡುವುದು ಸೇರಿದಂತೆ 189 ಹೊಸ ಶಿಫಾರಸುಗಳನ್ನು ರಾಜ್ಯ ಆಡಳಿತ ಸುಧಾರಣಾ ಆಯೋಗ ಸಲ್ಲಿಸಿದೆ.
ಗುರುವಾರ ಎಂಟನೇ ಆಡಳಿತ ಸುಧಾರಣಾ ವರದಿಯನ್ನು ಆಯೋಗ -2ರ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ.
ಆಯೋಗ ಈಗಾಗಲೇ 23 ಸರ್ಕಾರಿ ಇಲಾಖೆಗಳಿಗೆ ಭೇಟಿ ನೀಡಿ ಕಾರ್ಯವೈಖರಿ ಪರಿಶೀಲಿಸಿದ್ದು, ಇಲಾಖೆ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಲಾಗಿದೆ. ಸಾರ್ವಜನಿಕ ಉದ್ಯಮಗಳು ಮತ್ತು ಮಧ್ಯಸ್ಥಗಾರರ ಸಲಹೆ ಆಧಾರದ ಮೇಲೆ 189 ಹೊಸ ಶಿಫಾರಸುಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
23 ಇಲಾಖೆಗಳಲ್ಲಿ ಒಟ್ಟು 21,442 ಹುದ್ದೆಗಳು ಮಂಜೂರಾಗಿದ್ದು, 15000 ಖಾಲಿ ಹುದ್ದೆಗಳನ್ನು ಗುರುತಿಸಲಾಗಿದೆ. ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ ಕಿರಿಯ ತರಬೇತಿ ಅಧಿಕಾರಿಗಳ 1521 ಹುದ್ದೆ, ವೈದ್ಯಕೀಯ ಕಾಲೇಜ್ ಗಳ ಕಿರಿಯ ವೈದ್ಯರು 1080, ವೈದ್ಯಕೀಯ ಕಾಲೇಜ್ ನರ್ಸಿಂಗ್ ಅಧಿಕಾರಿಗಳು 1397, ಪಶು ಸಂಗೋಪನಾ ಇಲಾಖೆಯಲ್ಲಿ 1043 ವೈದ್ಯರು, ಕೃಷಿ ಇಲಾಖೆ ಎಎಒ ಹುದ್ದೆಗಳು 1870, ಕೃಷಿ ಅಧಿಕಾರಿ 732, ಸಹಕಾರ ಇಲಾಖೆಯಲ್ಲಿ 453 ಸೇರಿ ಒಟ್ಟು 15000 ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಲು ಶಿಫಾರಸು ಮಾಡಲಾಗಿದೆ ಎಂದು ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.