ಉತ್ತರ ಪ್ರದೇಶದ ಕಾನ್ಪುರದಲ್ಲಿ ಪ್ರೇಮ ವೈಫಲ್ಯದಿಂದ ನೊಂದ ವಿಕೃತ ಮನಸ್ಸಿನ ಯುವಕನೊಬ್ಬ ತನ್ನ ಗೆಳತಿಯನ್ನು ಸಾರ್ವಜನಿಕ ಉದ್ಯಾನವನದಲ್ಲಿ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಇನ್‌ಸ್ಟಾಗ್ರಾಮ್ ಮೂಲಕ ಆರಂಭವಾದ ಸ್ನೇಹವು ಪ್ರೇಮಕ್ಕೆ ತಿರುಗಿದ ನಂತರ, ಯುವತಿಯು ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು. ಇದರಿಂದ ಕೋಪಗೊಂಡ ಯುವಕ, “ನೀನು ನನ್ನವಳಾಗಲು ಸಾಧ್ಯವಿಲ್ಲದಿದ್ದರೆ, ನಾನು ನಿನ್ನನ್ನು ಬೇರೆಯಾಗಲು ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದನು.
ಒಂದು ವರ್ಷದ ಹಿಂದೆ, ಯುವತಿಯು ತನ್ನ ಗೆಳೆಯನ ಅಪರಾಧ ಹಿನ್ನೆಲೆಯ ಬಗ್ಗೆ ತಿಳಿದ ನಂತರ ಅವನಿಂದ ದೂರ ಸರಿದಿದ್ದಳು. ಆದರೆ ಆತ ಅವಳನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದನು ಮತ್ತು ನಿರಾಕರಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ. ಅಷ್ಟೇ ಅಲ್ಲದೆ, ಬೇರೆ ಬೇರೆ ನಂಬರ್‌ಗಳಿಂದ ಯುವತಿಯ ಕುಟುಂಬ ಸದಸ್ಯರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದನು.
ಶುಕ್ರವಾರ ಬೆಳಿಗ್ಗೆ, ಸೋಂಕರ್ ಎಂಬ ಆರೋಪಿ ಯುವತಿಗೆ ಕರೆ ಮಾಡಿ ಆಕೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ ಉದ್ಯಾನವನಕ್ಕೆ ಕರೆದಿದ್ದನು. ಅಲ್ಲಿ ಭೇಟಿಯಾದಾಗಲೂ ಆತ ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಆಕೆಯ ನಿರಾಕರಣೆಯನ್ನು ಸಹಿಸಲಾಗದೆ, ಆಕೆಯ ದುಪಟ್ಟಾದಿಂದ ಕತ್ತು ಹಿಸುಕಲು ಪ್ರಯತ್ನಿಸಿದ್ದಾನೆ. ಅಷ್ಟರಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದ ಜನರು ಮಧ್ಯಪ್ರವೇಶಿಸಿದ್ದರಿಂದ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಂತರ ಯುವತಿ ಮತ್ತು ಆಕೆಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಸೋಂಕರ್‌ನ ಮನೆಗೆ ಹೋದಾಗ ಆತ ಸಿಕ್ಕಿಲ್ಲ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 351 (2) (ಕ್ರಿಮಿನಲ್ ಬೆದರಿಕೆ) ಮತ್ತು 115 (2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.