ಉಡುಪಿ: ಮದ್ಯದ ಅಮಲಲ್ಲಿ ಗೆಳೆಯರಿಬ್ಬರ ನಡುವೆ ಗಲಾಟೆಯಾಗಿದ್ದು, ಈ ವೇಳೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಬೈಂದೂರು ತಾಲೂಕಿನ ಕೊಸಳ್ಳಿ ಸಮೀಪದ ದೇವರಗದ್ದೆ ಬಳಿ ಶನಿವಾರ ತಡರಾತ್ರಿ ಘಟನೆ ನಡೆದಿದೆ. ಕೇರಳ ಮೂಲದ ಬಿನೋ ಫಿಲಿಪ್(45) ಕೊಲೆಯಾದ ಕಾರ್ಮಿಕ. ಉದಯ್ ಕೊಲೆ ಆರೋಪಿಯಾಗಿದ್ದಾನೆ. ತೂದಳ್ಳಿ ದೇವರಗದ್ದೆ ನಿವಾಸಿ ಥಾಮಸ್ ಅವರ ತೋಟದಲ್ಲಿ ಇಬ್ಬರೂ ಎರಡು ವರ್ಷಗಳಿಂದ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು. ಮದ್ಯಪಾನ ಮಾಡಿದ ಸಂದರ್ಭದಲ್ಲಿ ಆಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದರು. ಶನಿವಾರ ತಡರಾತ್ರಿ ಇಬ್ಬರ ನಡುವೆ ಗಲಾಟೆಯಾಗಿದೆ. ಈ ಸಂದರ್ಭದಲ್ಲಿ ಉದಯ್ ರಬ್ಬರ್ ಟ್ಯಾಪಿಂಗ್ ಚಾಕುವಿನಿಂದ ಇರಿದಿದ್ದು, ತೀವ್ರವಾಗಿ ಗಾಯಗೊಂಡ ಬಿನೋ ಮೃತಪಟ್ಟಿದ್ದಾನೆ. ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.