ಸಾಮಾನ್ಯ ಹಿನ್ನಲೆಯಿಂದ ಬಂದ ವ್ಯಕ್ತಿ ಇಂದು 60,000 ಕೋಟಿ ರೂ. ಒಡೆಯ ; ಇಲ್ಲಿದೆ ʼಲೂಲು ಗ್ರೂಪ್ʼ ಅಧ್ಯಕ್ಷರ ಯಶಸ್ಸಿನ ಕಥೆ !

ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಭಾರತೀಯ ಮೂಲದ ಎಂ. ಎ. ಯೂಸುಫ್ ಅಲಿ ಅವರ ಜೀವನ ಪಯಣ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ಕೇರಳದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಇವರು ಇಂದು ಬರೋಬ್ಬರಿ 60,000 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಸಾಮ್ರಾಜ್ಯವನ್ನು ಕಟ್ಟಿದ್ದಾರೆ.

ಎಂ. ಎ. ಯೂಸುಫ್ ಅಲಿ, ವಿಶ್ವಾದ್ಯಂತ ಲೂಲು ಹೈಪರ್‌ಮಾರ್ಕೆಟ್ ಮತ್ತು ಲೂಲು ಇಂಟರ್‌ನ್ಯಾಷನಲ್ ಶಾಪಿಂಗ್ ಮಾಲ್‌ಗಳ ಒಡೆತನ ಹೊಂದಿರುವ ಲೂಲು ಗ್ರೂಪ್ ಇಂಟರ್‌ನ್ಯಾಷನಲ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಫೋರ್ಬ್ಸ್ ನಿಯತಕಾಲಿಕೆಯ ಅಕ್ಟೋಬರ್ 2023 ರ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಯೂಸುಫ್ ಅಲಿ 6.9 ಬಿಲಿಯನ್ ಯುಎಸ್ ಡಾಲರ್ (ಅಂದಾಜು 60 ಸಾವಿರ ಕೋಟಿ ರೂಪಾಯಿಗಳು) ನಿವ್ವಳ ಮೌಲ್ಯದೊಂದಿಗೆ ಭಾರತದ 27 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

1955 ರ ನವೆಂಬರ್ 15 ರಂದು ಕೇರಳದ ತ್ರಿಶೂರ್‌ನಲ್ಲಿ ಜನಿಸಿದ ಯೂಸುಫ್ ಅಲಿ, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕರಂಚಿರದ ಸೇಂಟ್ ಕ್ಸೇವಿಯರ್ಸ್ ಹೈಸ್ಕೂಲ್‌ನಲ್ಲಿ ಪೂರೈಸಿದರು. ನಂತರ ಅವರು ಬಿಸಿನೆಸ್ ಮ್ಯಾನೇಜ್‌ಮೆಂಟ್ ಮತ್ತು ಅಡ್ಮಿನಿಸ್ಟ್ರೇಷನ್‌ನಲ್ಲಿ ಡಿಪ್ಲೊಮಾ ಪದವಿ ಪಡೆದರು.

ತಮ್ಮ ಶಿಕ್ಷಣದ ನಂತರ, ಯೂಸುಫ್ ಅಲಿ, ಅಬುಧಾಬಿಗೆ ತೆರಳಿ ಅಲ್ಲಿ ಅವರು ಲೂಲು ಗ್ರೂಪ್ ಆಫ್ ಕಂಪೆನಿಗಳ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದ ತಮ್ಮ ಚಿಕ್ಕಪ್ಪ ಎಂ. ಕೆ. ಅಬ್ದುಲ್ಲಾ ಅವರೊಂದಿಗೆ ಕೈಜೋಡಿಸಿದರು. ಆರಂಭದಲ್ಲಿ, ಅಲಿ ಅವರು ಗುಂಪಿನ ಆಮದು ಮತ್ತು ಸಗಟು ವಿತರಣೆಯ ಜವಾಬ್ದಾರಿಯನ್ನು ನಿರ್ವಹಿಸಿದರು. 1990 ರ ದಶಕದಲ್ಲಿ, ಅವರು ಲೂಲು ಹೈಪರ್‌ಮಾರ್ಕೆಟ್ ಅನ್ನು ಪ್ರಾರಂಭಿಸುವ ಮೂಲಕ ಸೂಪರ್‌ಮಾರ್ಕೆಟ್ ವ್ಯವಹಾರಕ್ಕೆ ಯಶಸ್ವಿಯಾಗಿ ಕಾಲಿಟ್ಟರು.

ತಮ್ಮ ಅದ್ಭುತ ವ್ಯಾಪಾರ ಕೌಶಲ್ಯ ಮತ್ತು ಪರಿಶ್ರಮದಿಂದಾಗಿ, ಯೂಸುಫ್ ಅಲಿ ಅವರು ಲೂಲು ಗ್ರೂಪ್ ಅನ್ನು ಒಂದು ಬೃಹತ್ ಅಂತರಾಷ್ಟ್ರೀಯ ಉದ್ಯಮವಾಗಿ ಬೆಳೆಸಿದ್ದಾರೆ. ಇಂದು ಈ ಸಂಸ್ಥೆಯು ವಿವಿಧ ರಾಷ್ಟ್ರಗಳಲ್ಲಿ ತನ್ನ ಕಾರ್ಯಾಚರಣೆಗಳನ್ನು ಹೊಂದಿದೆ. ವಿಶೇಷವೆಂದರೆ, ಕೇರಳದ ಕೊಚ್ಚಿಯಲ್ಲಿ 2013 ರ ಮಾರ್ಚ್ 10 ರಂದು ಪ್ರಾರಂಭವಾದ ಲೂಲು ಇಂಟರ್‌ನ್ಯಾಷನಲ್ ಶಾಪಿಂಗ್ ಮಾಲ್, ಭಾರತದಲ್ಲಿ ಲೂಲು ಗ್ರೂಪ್‌ನ ಮೊದಲ ಚಿಲ್ಲರೆ ವ್ಯಾಪಾರ ಉದ್ಯಮವಾಗಿದೆ.

ಹಳ್ಳಿಯ ಸಾಮಾನ್ಯ ಹಿನ್ನೆಲೆಯಿಂದ ಬಂದ ವ್ಯಕ್ತಿಯೊಬ್ಬರು ತಮ್ಮ ಛಲ ಮತ್ತು ಪರಿಶ್ರಮದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸನ್ನು ಸಾಧಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಯೂಸುಫ್ ಅಲಿ ಅವರ ಈ ಯಶೋಗಾಥೆ ಅನೇಕರಿಗೆ ಪ್ರೇರಣಾದಾಯಕವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read