ಪುರುಷ ಮತ್ತು ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗುವ ಸಾಮಾನ್ಯ ಸಂಗತಿ; ಇದಕ್ಕೂ ಇದೆ ಪರಿಹಾರ

 

ಗರ್ಭಾವಸ್ಥೆ ಬಹಳ ಕಷ್ಟಕರವಾದ ಪ್ರಕ್ರಿಯೆ. ಮಕ್ಕಳನ್ನು ಹೊಂದಲು  ಪುರುಷ ಮತ್ತು ಮಹಿಳೆ ದೈಹಿಕವಾಗಿ ಆರೋಗ್ಯಕರವಾಗಿರುವುದು ಬಹಳ ಮುಖ್ಯ. ಯಾವುದೇ ಒಂದು ಅಂಶದ ಕೊರತೆಯಿದ್ದರೂ ಕುಟುಂಬವನ್ನು ಪ್ರಾರಂಭಿಸುವ ದಂಪತಿಗಳ ಕನಸು ನನಸಾಗುವುದು ಕಷ್ಟವಾಗುತ್ತದೆ. ಹಾಗಾಗಿ ಮಕ್ಕಳನ್ನು ಹೊಂದಲು ಬಯಸುವವರು ಇಂತಹ ಸಾಮಾನ್ಯ ಆರೋಗ್ಯ ಪರಿಸ್ಥಿತಿಗಳ ಬಗ್ಗೆ ತಿಳಿದಿರಬೇಕು. ಗರ್ಭಧರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಅಂಶಗಳ ಬಗ್ಗೆ ತಿಳಿದಿಕೊಳ್ಳಬೇಕು.

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS)

ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರು PCOSನಿಂದ ಪ್ರಭಾವಿತರಾಗುತ್ತಾರೆ. ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌ ಅನ್ನೋದು ಹಾರ್ಮೋನುಗಳ ಸ್ಥಿತಿಯಾಗಿದೆ. ಪಾಲಿಸಿಸ್ಟಿಕ್ ಅಂಡಾಶಯಗಳು, ಹೆಚ್ಚಿನ ಆಂಡ್ರೊಜೆನ್ ಲೆವಲ್‌ ಮತ್ತು ಅನಿಯಮಿತ ಮುಟ್ಟು ಇದರ ಮುಖ್ಯ ಲಕ್ಷಣಗಳಾಗಿವೆ. ಪಿಸಿಓಎಸ್ ಹೊಂದಿರುವ ಮಹಿಳೆಯರಲ್ಲಿ ಅಂಡೋತ್ಪತ್ತಿಯ ಕೊರತೆ ಕಾಣಿಸಿಕೊಳ್ಳಬಹುದು, ಅಥವಾ ಅಂಡೋತ್ಪತ್ತಿ ಅನಿಯಮಿತವಾಗಿರುತ್ತದೆ. ಇದರಿಂದ ಗರ್ಭಧರಿಸುವುದು ಸವಾಲಾಗಿ ಪರಿಣಮಿಸುತ್ತದೆ. ಪಿಸಿಓಎಸ್‌ ಅನ್ನು ನಿಯಂತ್ರಿಸಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಇದಲ್ಲದೆ ಅಂಡೋತ್ಪತ್ತಿಯನ್ನು ಪ್ರಚೋದಿಸುವ ಚಿಕಿತ್ಸೆಗಳು, ಋತುಚಕ್ರವನ್ನು ನಿಯಂತ್ರಿಸಲು ಔಷಧಿಗಳು ಕೂಡ ಲಭ್ಯವಿವೆ.

ಎಂಡೊಮೆಟ್ರಿಯೊಸಿಸ್

ಎಂಡೊಮೆಟ್ರಿಯೊಸಿಸ್ ಸಾಮಾನ್ಯವಾಗಿ ಅಂಡಾಶಯಗಳು, ಫಾಲೋಪಿಯನ್ ಟ್ಯೂಬ್‌ಗಳು ಮತ್ತು ಪೆಲ್ವಿಕ್ ಲೈನಿಂಗ್ ಮೇಲೆ ಪರಿಣಾಮ ಬೀರುತ್ತದೆ. ಇದು ಗರ್ಭಾಶಯದ ಒಳಗಿನ ಪದರವನ್ನು ಹೋಲುವ ಅಂಗಾಂಶದ ಬೆಳವಣಿಗೆಯಿಂದ ಉಂಟಾಗುತ್ತದೆ. ಈ ಕಾಯಿಲೆಯಿಂದ ಬಂಜೆತನ, ಮುಟ್ಟಿನ ಸಮಯದಲ್ಲಿ ನೋವು ಮತ್ತು ಭಾರೀ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ ಎಗ್‌ ಸಾಮರ್ಥ್ಯವನ್ನು ಸಹ ಇದು ಕಡಿಮೆ ಮಾಡುತ್ತದೆ. ಎಂಡೋಮೆಟ್ರಿಯೋಸಿಸ್‌ ಚಿಕಿತ್ಸೆಗಾಗಿ ಹಾರ್ಮೋನ್ ಥೆರಪಿ, ನೋವು ನಿರ್ವಹಣೆ ಮತ್ತು ಎಂಡೊಮೆಟ್ರಿಯಲ್ ಟಿಶ್ಯೂ ಎಕ್ಸಿಶನ್ ಸರ್ಜರಿ ಲಭ್ಯವಿದೆ.

ಇನ್ನು ಸುಮಾರು 30-40 ಪ್ರತಿಶತ ಬಂಜೆತನ ಪ್ರಕರಣಗಳು ಪುರುಷರಲ್ಲೂ ಕಾಣಿಸಿಕೊಳ್ಳುತ್ತವೆ. ವೀರ್ಯಾಣುವಿನ ಕೊರತೆ, ಕಡಿಮೆ ಚಲನಶೀಲತೆ ಮತ್ತು ಅನಿಯಮಿತ ವೀರ್ಯದ ಆಕಾರದಂತಹ ಅಂಶಗಳು ತಂದೆಯಾಗುವ ಪುರುಷರ ಕನಸನ್ನು ನುಚ್ಚುನೂರು ಮಾಡಬಹುದು. ಪುರುಷ ಬಂಜೆತನವು ಹಾರ್ಮೋನ್ ಅಸಮತೋಲನ, ಆನುವಂಶಿಕ ಅಸ್ವಸ್ಥತೆಗಳು, ಜಡ ಜೀವನಶೈಲಿಯಿಂದಲೂ ಉಂಟಾಗುತ್ತದೆ. ಇದಲ್ಲದೆ ಧೂಮಪಾನ ಮತ್ತು ಅತಿಯಾದ ಮದ್ಯಪಾನ ಕೂಡ ಇದಕ್ಕೆ ಕಾರಣವಾಗಬಹುದು. ಐವಿಎಫ್,ಇತರ  ಔಷಧಿಗಳು ಮತ್ತು ಜೀವನಶೈಲಿ ಮಾರ್ಪಾಡುಗಳ ಮೂಲಕ ಪುರುಷ ಬಂಜೆತನಕ್ಕೆ ಚಿಕಿತ್ಸೆ ನೀಡಬಹುದು.

ಥೈರಾಯ್ಡ್ ಅಸ್ವಸ್ಥತೆ

ಹೈಪರ್ ಥೈರಾಯ್ಡಿಸಮ್ ಮತ್ತು ಹೈಪೋಥೈರಾಯ್ಡಿಸಮ್ ಎರಡೂ ಕೂಡ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು. ಅಂಡೋತ್ಪತ್ತಿ ಮತ್ತು ಋತುಚಕ್ರವನ್ನು ನಿಯಂತ್ರಿಸಲು ಥೈರಾಯ್ಡ್ ಹಾರ್ಮೋನುಗಳು ಅವಶ್ಯಕ. ಈ ಹಾರ್ಮೋನುಗಳ ಅಸಮತೋಲನವು ಅನಿಯಮಿತ ಮುಟ್ಟು ಮತ್ತು ಇತರ ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಕಾರಣವಾಗಬಹುದು. ಥೈರಾಯ್ಡ್ಗೆ ಸೂಕ್ತ ಚಿಕಿತ್ಸೆ ಪಡೆಯುವುದು ಕೂಡ ಅವಶ್ಯಕ.

ಗರ್ಭಾಶಯ ಮತ್ತು ಟ್ಯೂಬ್ ಸಮಸ್ಯೆ

ಫಾಲೋಪಿಯನ್ ಟ್ಯೂಬ್ಗಳು ಅಥವಾ ಗರ್ಭಾಶಯದ ಆಂತರಿಕ ರಚನೆಯಲ್ಲಿನ ಸಮಸ್ಯೆಗಳಿಂದಲೂ ಗರ್ಭಧಾರಣೆ ಕಷ್ಟಕರವಾಗುತ್ತದೆ. ಗರ್ಭಾಶಯದಲ್ಲಿ ಕ್ಯಾನ್ಸರ್ ಅಲ್ಲದ ಬೆಳವಣಿಗೆಗಳು, ಪಾಲಿಪ್ಸ್ ಮತ್ತು ಗಾಯದ ಅಂಗಾಂಶ ಸೇರಿದಂತೆ ಅನೇಕ ಸಮಸ್ಯೆಗಳು ಭ್ರೂಣದ ಅಳವಡಿಕೆಯ ಮೇಲೆ ಪರಿಣಾಮ ಬೀರಬಹುದು. ಹಾನಿಗೊಳಗಾದ ಅಥವಾ ನಿರ್ಬಂಧಿಸಲಾದ ಫಾಲೋಪಿಯನ್ ಟ್ಯೂಬ್‌ಗಳು ವೀರ್ಯ, ಎಗ್‌ನೊಳಕ್ಕೆ ತಲುಪದಂತೆ ತಡೆಯುತ್ತವೆ. ಫಲವತ್ತಾದ ಎಗ್‌ ಗರ್ಭಾಶಯವನ್ನು ತಲುಪದಂತೆ ತಡೆಯಬಹುದು. ಈ ಎಲ್ಲಾ ಸಮಸ್ಯೆಗಳನ್ನು ಅರಿತು ವೈದ್ಯರ ಬಳಿ ಪರೀಕ್ಷಿಸಿಕೊಂಡಲ್ಲಿ ಬಂಜೆತನಕ್ಕೆ ಪರಿಹಾರ ಸಿಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read