ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್ ಅವರು ‘ಬೇಟಿ ಬಚಾವೋ, ಬೇಟಿ ಪಡಾವೋ’ (Save Daughter, Educate Daughter- ಮಗಳನ್ನು ಉಳಿಸಿ, ಮಗಳಿಗೆ ಶಿಕ್ಷಣ ಕೊಡಿ). ಎಂಬ ಘೋಷಣೆಯನ್ನು ಬರೆಯಲು ವಿಫಲವಾದ ವೀಡಿಯೊ ವೈರಲ್ ಆಗುತ್ತಿದೆ.
ಧಾರ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿರುವ ಸಾವಿತ್ರಿ ಠಾಕೂರ್ ಅವರು ಹೊಸದಾಗಿ ದಾಖಲಾದ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಧಾರ್ ಜಿಲ್ಲೆಯ ಬ್ರಹ್ಮಕುಂಡ್‌ನಲ್ಲಿರುವ ಶಾಲೆಗೆ ಅತಿಥಿಗಳಾಗಿ ಆಗಮಿಸಿದ್ದರು.
‘ಲೆಟ್ಸ್ ಗೋ ಟು ಸ್ಕೂಲ್’ ಅಭಿಯಾನದ ಕಾರ್ಯಕ್ರಮದ ಭಾಗವಾಗಿ ಅವರು ಶಾಲೆಯ ಬೋರ್ಡ್‌ನಲ್ಲಿ ‘ಮಗಳನ್ನು ಉಳಿಸಿ, ಮಗಳಿಗೆ ಶಿಕ್ಷಣ ಕೊಡಿ’ ಎಂದು ಬರೆಯಲು ಪ್ರಯತ್ನಿಸಿದರು. ಆದರೆ ಅದನ್ನು ಸರಿಯಾಗಿ ಬರೆಯಲು ಆವರಿಗೆ ಸಾಧ್ಯವಾಗಲಿಲ್ಲ.
ಹೆಣ್ಣು ಮಕ್ಕಳನ್ನು ಶಾಲೆಗೆ ಸೇರಿಸುವುದನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಸಚಿವ ಠಾಕೂರ್ ಅವರು ಶಾಲಾ ಬೋರ್ಡ್‌ನಲ್ಲಿ ‘Save Daughter, Educate Daughter’ ಎಂಬ ಸಂದೇಶವನ್ನು ಬರೆಯಲು ಪ್ರಯತ್ನಿಸಿದರು. ಆದರೆ , ‘Save Daughter, Educate Daughter’ ಎಂದು ಬರೆಯುವ ಬದಲು ‘ಎಜುಕೇಟ್ ಡಾಟರ್, ಸೇವ್’ ಎಂದು ಬರೆದಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ ಸಚಿವೆಗೆ ತಾನು ಬರೆದಿರುವುದು ತಪ್ಪಾಗಿದೆ ಎಂಬ ಅರಿವಿತ್ತು. ಇಷ್ಟೇ ಅಲ್ಲದೇ ಅವರೊಂದಿಗಿದ್ದವರು ತಪ್ಪನ್ನು ಸರಿಪಡಿಸುವಂತೆ ಸೂಚಿಸಿದರೂ, ಸಚಿವೆ ಸಾವಿತ್ರಿ ಠಾಕೂರ್ ಗೆ ಅದನ್ನು ಸರಿಪಡಿಸಲು ಸಾಧ್ಯವಾಗಲಿಲ್ಲ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವೆ ಸಲ್ಲಿಸಿರುವ ಚುನಾವಣಾ ಅಫಿಡವಿಟ್ ಪ್ರಕಾರ ಅವರು 12 ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದಾರೆ. ಧಾರ್ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಆವರ ಕುಟುಂಬಕ್ಕೆ ರಾಜಕೀಯ ಹಿನ್ನೆಲೆ ಇಲ್ಲ. ಅವರ ಪತಿ ರೈತರಾಗಿದ್ದು ಅವರ ತಂದೆ ಸರ್ಕಾರಿ ಉದ್ಯೋಗಿಯಾಗಿದ್ದಾರೆ.