ಬೆಂಗಳೂರು: ಲೋಕಸಭೆ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಮುಂದೂಡಿದ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರು, ಮುಖ್ಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪುನಾರಂಭಿಸಲು ಶಿಕ್ಷಣ ಇಲಾಖೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ವರ್ಷಕ್ಕೆ ಸೀಮಿತಗೊಳಿಸಿ ವಲಯ ವರ್ಗಾವಣೆಯನ್ನು ಕೈಬಿಟ್ಟು ಇತರೆ ವರ್ಗಾವಣೆ ಮುಂದುವರಿಸಲಾಗುವುದು. ಕೋರಿಕೆ ಮತ್ತು ಪರಸ್ಪರ ವರ್ಗಾವಣೆ ಅರ್ಜಿ ಸಲ್ಲಿಸಲು ಇದ್ದ ಕಾಲಾವಕಾಶವನ್ನು ಜೂನ್ 20ರವರೆಗೆ ವಿಸ್ತರಿಸಲಾಗಿದೆ.
ವರ್ಗಾವಣೆಗೆ ಅರ್ಜಿ ಸಲ್ಲಿಸಿದ ಶಿಕ್ಷಕರ ಅರ್ಹತೆ ಪರಿಶೀಲಿಸಿ ಆಕ್ಷೇಪಣೆಗಳನ್ನು ಪರಿಶೀಲಿಸಿ ಜುಲೈ 18ರಂದು ಪ್ರಕಟಿಸಬೇಕು. ಜುಲೈ 10ಕ್ಕೆ ಎಲ್ಲಾ ಜಿಲ್ಲಾ ಉಪ ನಿರ್ದೇಶಕರ ವ್ಯಾಪ್ತಿಯಲ್ಲಿ ವರ್ಗಾವಣೆಗೆ ಖಾಲಿ ಇರುವ ಹುದ್ದೆಗಳ ಪಟ್ಟಿ ಪ್ರಕಟಿಸಬೇಕು ಎಂದು ಹೇಳಲಾಗಿದೆ.
ಕನಿಷ್ಠ ಐದು ವರ್ಷ ಸೇವೆ ಪೂರ್ಣಗೊಳಿಸಿರುವ ಪ್ರಾಥಮಿಕ ಶಿಕ್ಷಕರಿಗೆ ಜುಲೈ 19ರಂದು, ಪ್ರೌಢಶಾಲೆ ಶಿಕ್ಷಕರಿಗೆ ಜುಲೈ 20ರಂದು ಸ್ಥಳ ನಿಯುಕ್ತಿಗೊಳಿಸಬೇಕು. ನಿರ್ದಿಷ್ಟಪಡಿಸಿದ ಹುದ್ದೆಗಳ ಕೌನ್ಸಿಲಿಂಗ್ ನಂತರ ಉಳಿಕೆಯಾದ ಶಿಕ್ಷಕರನ್ನು ಜುಲೈ 22ರೊಳಗೆ ಜಿಲ್ಲೆಯೊಳಗೆ ಮರು ಹೊಂದಾಣಿಕೆ ಮಾಡಿ ಆಗಸ್ಟ್ 27ರೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.