ಬೆಂಗಳೂರು: ನಟ ದರ್ಶನ್ ಅವರ ಅಭಿಮಾನಿ ಕೊಲೆ ಪ್ರಕರಣದ ಪ್ರಮುಖ ಶಂಕಿತರಲ್ಲಿ ಒಬ್ಬರಾದ ಪವಿತ್ರಾ ಗೌಡ ಅವರು ನಟನ ಸ್ನೇಹಿತೆ ಮಾತ್ರವೇ ಹೊರತು ಅವರ ಪತ್ನಿಯಲ್ಲ ಎಂದು ದರ್ಶನ್ ಪರ ವಕೀಲ ಅನಿಲ್ ಬಾಬು ಸ್ಪಷ್ಟಪಡಿಸಿದ್ದಾರೆ.
ಈ ವಾರದ ಆರಂಭದಲ್ಲಿ, ಚಿತ್ರದುರ್ಗದ 33 ವರ್ಷದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ದರ್ಶನ್, ಪವಿತ್ರ ಗೌಡ ಮತ್ತು ಇತರ 14 ಜನರನ್ನು ಬಂಧಿಸಲಾಗಿತ್ತು.
ಪವಿತ್ರಾ ಗೌಡ, ದರ್ಶನ್ ತೂಗುದೀಪ ಅವರ ಎರಡನೇ ಪತ್ನಿ ಅಥವಾ ಸಂಗಾತಿ ಎಂಬ ವರದಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ ಅನಿಲ್ ಬಾಬು, ವಿಜಯಲಕ್ಷ್ಮಿ ಕಾನೂನುಬದ್ಧವಾಗಿ ವಿವಾಹವಾದ ಪತ್ನಿ ಮತ್ತು ಪವಿತ್ರಾ ಗೌಡ ಕೇವಲ ಸಹನಟಿ ಮತ್ತು ಸ್ನೇಹಿತರು ಎಂದು ಹೇಳಿದ್ದಾರೆ.
ಪವಿತ್ರಾ ಗೌಡ ಎರಡನೇ ಪತ್ನಿ ಎಂಬುದು ಸಂಪೂರ್ಣ ಸುಳ್ಳು. ಅವಳು ಕೇವಲ ಸ್ನೇಹಿತೆ. ಅವರು ಸಹ-ನಟಿಯಾಗಿದ್ದರು. ಈಗ ಅವರು ಸ್ನೇಹ ಸಂಬಂಧವನ್ನು ಹೊಂದಿದ್ದಾರೆ, ಬೇರೇನೂ ಇಲ್ಲ. ಮೊದಲ ಪತ್ನಿ ವಿಜಯಲಕ್ಷ್ಮಿ ಒಬ್ಬರೆ ದರ್ಶನ್ ಪತ್ನಿ. ಯಾವುದೇ ಸಮಯದಲ್ಲಿ ಎರಡನೇ ಮದುವೆ ಆಗಿಲ್ಲ ಎಂದು ಅನಿಲ್ ಬಾಬು ಹೇಳಿದ್ದಾರೆ.
ದರ್ಶನ್ ಗೂ ರೇಣುಕಾಸ್ವಾಮಿಗೂ ಯಾವುದೇ ಸಂಬಂಧವಿಲ್ಲ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಬಾಬು ಹೇಳಿದ್ದಾರೆ. ಅಪರಾಧ ನಡೆದ ಸ್ಥಳದ ಬಳಿ ದರ್ಶನ್ ಅವರ ಕಾರನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳನ್ನು ಉದ್ದೇಶಿಸಿ ಮಾತನಾಡಿದ ಬಾಬು, ನಟ ಕಾರಿನಲ್ಲಿ ಇರಲಿಲ್ಲ ಮತ್ತು ಅವರು ಅಲ್ಲಿ ಇರುವುದನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳನ್ನು ಪೊಲೀಸರು ಒದಗಿಸಿಲ್ಲ ಎಂದು ಹೇಳಿದ್ದಾರೆ.