ಬೆಂಗಳೂರು: ಹೊಸಕೋಟೆಯ ರಾಷ್ಟ್ರೀಯ ಹೆದ್ದಾರಿ 75ರ ಡಾಬಾ ಬಳಿ ಅಡ್ಡಾದಿಡ್ಡಿ ಕಾರ್ ಚಲಾಯಿಸಿದ್ದನ್ನು ಪ್ರಶ್ನಿಸಿದಕ್ಕೆ ಯುವಕನನ್ನು ಕೊಲೆ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಹೊಸಕೋಟೆ ತಾಲೂಕು ಗಂಗಾಪುರ ನಿವಾಸಿ ನವೀನ್ ನಾಯಕ(27) ಎಂಬ ಯುವಕನ ಕೊಲೆ ಮಾಡಲಾಗಿದೆ.
ತರಕಾರಿ ವ್ಯಾಪಾರಕ್ಕೆ ಹೊಸಕೋಟೆ ಕಡೆಗೆ ನವೀನ್ ಬರುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಕಾರ್ ಚಲಾಯಿಸಿಕೊಂಡು ಬಂದ ಗುಂಪು ಪ್ರಶ್ನಿಸಿದ ನವೀನ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದೆ. ಕೊಲೆ ಬಳಿಕ ವಾಹನ ಸಮೇತ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ ಚಾಲನೆ ವಿಚಾರ ಅಥವಾ ವೈಯಕ್ತಿಕ ವಿಚಾರಕ್ಕೆ ಕೊಲೆ ನಡೆದಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಿದ್ದಾರೆ. ಕೊಲೆ ವಿಚಾರ ತಿಳಿದು ಹೆದ್ದಾರಿ ಬದಿಯಲ್ಲಿ ಜನ ಜಮಾಯಿಸಿದ್ದಾರೆ. ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.