ನವದೆಹಲಿ : ಟೊರೊಂಟೊಗೆ ತೆರಳುತ್ತಿದ್ದ ಏರ್ ಕೆನಡಾ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಕಳೆದ ಮಂಗಳವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಬೆದರಿಕೆ ಮೇಲ್ ಕಳುಹಿಸಿದ ಆರೋಪದ ಮೇಲೆ 13 ವರ್ಷದ ಬಾಲಕನನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶದ ಮೀರತ್ ಮೂಲದ ಬಾಲಕ ತಾನು ಕೇವಲ ಮೋಜಿಗಾಗಿ ಬೆದರಿಕೆ ಮೇಲ್ ಕಳುಹಿಸಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ದೂರದರ್ಶನದಲ್ಲಿ ಇದೇ ರೀತಿಯ ಸುದ್ದಿಗಳನ್ನು ನೋಡಿದ ನಂತರ ತನಗೆ ಈ ಆಲೋಚನೆ ಬಂದಿದೆ ಎಂದು ಹೇಳಿದ್ದಾನೆ.
ಮೇಲ್ ಕಳುಹಿಸಲು ಬಾಲಕ ನಕಲಿ ಇಮೇಲ್ ಐಡಿಯನ್ನು ರಚಿಸಿದ್ದನು. “ಅವನು ತನ್ನ ಫೋನ್ ನಿಂದ ಮೇಲ್ ಕಳುಹಿಸಿದ್ದಾನೆ, ಅದಕ್ಕಾಗಿ ಅವನು ತನ್ನ ತಾಯಿಯ ವೈಫೈ ಸಂಪರ್ಕವನ್ನು ಬಳಸಿದ್ದಾನೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಮೇಲ್ ಕಳುಹಿಸಿದ ನಂತರ, ಅವನು ತಕ್ಷಣ ಇಮೇಲ್ ಐಡಿಯನ್ನು ಡಿಲೀಟ್ ಮಾಡಿದ್ದಾನೆ ಎಂದು ಅವರು ಹೇಳಿದರು.ಆದರೆ, ಭಯದಿಂದ ಆತ ತನ್ನ ಪೋಷಕರೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಐಜಿಐ ವಿಮಾನ ನಿಲ್ದಾಣದ ಉಪ ಪೊಲೀಸ್ ಆಯುಕ್ತೆ ಉಷಾ ರಂಗ್ನಾನಿ ಹೇಳಿದ್ದಾರೆ.
ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (ಡಿಐಎಎಲ್) ಕಚೇರಿಗೆ ಕಳೆದ ಮಂಗಳವಾರ (ಜೂನ್ 12) ರಾತ್ರಿ 10.50 ಕ್ಕೆ ಇಮೇಲ್ ಬಂದಿದ್ದು, ವಿಮಾನವು 12 ಗಂಟೆಗಳ ಕಾಲ ವಿಳಂಬವಾಗಿದೆ. ಸಂಪೂರ್ಣ ತಪಾಸಣೆಯ ನಂತರ, ವಿಮಾನದಲ್ಲಿ ಏನೂ ಕಂಡುಬಂದಿಲ್ಲ . ತನಿಖೆ ನಡೆಸಿದ ದೆಹಲಿ ಪೊಲೀಸರ ತಂಡಕ್ಕೆ ಬಾಲಕನೇ ಇ ಮೇಲ್ ಮಾಡಿರುವುದು ಧೃಡವಾಗಿದೆ.