ನವದೆಹಲಿ: ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ(ಎನ್‌ಡಿಎ) ಎಲ್ಲಾ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೈತ್ರಿಕೂಟದ ನಾಯಕರಾಗಿ ತಮ್ಮ ಬೆಂಬಲವನ್ನು ನೀಡಿದ್ದಾರೆ.
ಮುಂದಿನ ಸರ್ಕಾರ ರಚನೆಯ ಕುರಿತು ಚರ್ಚಿಸಲು ಲೋಕಸಭೆ ಚುನಾವಣೆ ಫಲಿತಾಂಶದ ಒಂದು ದಿನದ ನಂತರ 7, ಲೋಕ ಕಲ್ಯಾಣ್ ಮಾರ್ಗ್‌ನಲ್ಲಿರುವ ಪ್ರಧಾನಿಯವರ ನಿವಾಸದಲ್ಲಿ ನಡೆದ ಪ್ರಮುಖ ಎನ್‌ಡಿಎ ಸಭೆಯ ನಂತರ ಈ ಬೆಳವಣಿಗೆ ನಡೆದಿದೆ.
ಪ್ರಧಾನಿ ನಿವಾಸದಲ್ಲಿ ನಡೆದ ಎನ್‌ಡಿಎ ಪಾಲುದಾರರ ಸಭೆಯಲ್ಲಿ ಬಿಹಾರ ಸಿಎಂ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ತೆಲುಗು ದೇಶಂ ಪಕ್ಷ(ಟಿಡಿಪಿ)ದ ಚಂದ್ರಬಾಬು ನಾಯ್ಡು, ಲೋಕ ಜನಶಕ್ತಿ ಪಕ್ಷ(ಎಲ್‌ಜೆಪಿ) ಚಿರಾಗ್ ಪಾಸ್ವಾನ್, ರಾಷ್ಟ್ರೀಯ ಲೋಕದಳ(ಆರ್‌ಎಲ್‌ಡಿ) ಜಯಂತ್ ಚೌಧರಿ, ಜೆಡಿಎಸ್ ನ ಹೆಚ್.ಡಿ. ಕುಮಾರಸ್ವಾಮಿ, ಜಿತನ್ ರಾಮ್ ಮಾಂಝಿ, ಅನುಪ್ರಿಯಾ ಪಟೇಲ್, ಏಕನಾಥ್ ಶಿಂಧೆ ಜೊತೆಗೆ ಬಿಜೆಪಿಯ ಉನ್ನತ ನಾಯಕತ್ವದಲ್ಲಿ ಅಮಿತ್ ಶಾ, ರಾಜನಾಥ್ ಸಿಂಗ್, ಜೆಪಿ ನಡ್ಡಾ ಇತರರು ಭಾಗವಹಿಸಿದ್ದರು.
ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆ ಮತ್ತು ಕೇಂದ್ರದಲ್ಲಿ ಸರ್ಕಾರ ರಚಿಸಲು ಎನ್‌ಡಿಎ ಮಿತ್ರಪಕ್ಷಗಳ ಅಗತ್ಯವಿರುವುದರಿಂದ, ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿ(ಯು) ಮುಖ್ಯಸ್ಥ ನಿತೀಶ್ ಕುಮಾರ್ ಮತ್ತು ಟಿಡಿಪಿಯ ಎನ್. ಚಂದ್ರಬಾಬು ನಾಯ್ಡು ಅವರು ಸಂಭಾವ್ಯ ಕಿಂಗ್ ಮೇಕರ್ ಗಳಾಗಿ ಹೊರಹೊಮ್ಮಿದ್ದಾರೆ.