ಕಳೆದ ಒಂದು ವರ್ಷದಲ್ಲಿ ದೇಶಾದ್ಯಂತ 1.16 ಲಕ್ಷ ರೈತರು ಕಿಸಾನ್ ಸಮ್ಮಾನ್ ಯೋಜನೆಯ ಪ್ರಯೋಜನವನ್ನು ಸ್ವಯಂಪ್ರೇರಣೆಯಿಂದ ತ್ಯಜಿಸಿದ್ದಾರೆ. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಜೂನ್ 2023 ರಿಂದ ಮೇ 2024 ರವರೆಗೆ ದೇಶಾದ್ಯಂತ ವಾರ್ಷಿಕ ರೂ. 6,000 ಪಡೆಯುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ ಪ್ರಯೋಜನಗಳನ್ನು ಸ್ವಯಂಪ್ರೇರಣೆಯಿಂದ 1.16 ಲಕ್ಷ ರೈತರು ತ್ಯಜಿಸಿದ್ದಾರೆ. ಈ ಪಟ್ಟಿಯಲ್ಲಿ ಬಿಹಾರ, ಉತ್ತರ ಪ್ರದೇಶ ಮತ್ತು ರಾಜಸ್ಥಾನವು ಅಗ್ರಸ್ಥಾನದಲ್ಲಿದೆ.
ಬಿಹಾರದಲ್ಲಿ 29,176 ರೈತರ ಕುಟುಂಬಗಳು, ಉತ್ತರ ಪ್ರದೇಶದ 26,593 ಮತ್ತು ರಾಜಸ್ಥಾನದ 10,343 ರೈತರು ಯೋಜನೆಯನ್ನು ತ್ಯಜಿಸಿದ್ದಾರೆ. ಕೃಷಿ ಸಚಿವಾಲಯವು ಕಳೆದ ವರ್ಷ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ಸೈಟ್ನಲ್ಲಿ ಮಾಡ್ಯೂಲ್ ಅನ್ನು ಪರಿಚಯಿಸಿದ್ದು ಇದರಲ್ಲಿ ರೈತರು ಸ್ವಯಂಪ್ರೇರಿತವಾಗಿ ಯೋಜನೆಯಿಂದ ನಿರ್ಗಮಿಸುವ ಅವಕಾಶ ಇದೆ.
ಭೂಮಾಲೀಕರ ಬದಲಾವಣೆ, ಯೋಜನೆಗೆ ಅರ್ಹರಲ್ಲದ ತೆರಿಗೆ ಪಾವತಿದಾರರಿಗೆ ವರ್ಗಾವಣೆಯಾದ ಜಮೀನು, ಸಬ್ಸಿಡಿ ಪಡೆಯದಿರುವ ನಿರ್ಧಾರಗಳು ಯೋಜನೆಯ ಪ್ರಯೋಜನ ತ್ಯಜಿಸಲು ಕಾರಣಗಳಾಗಿವೆ.
ಪಿಎಂ-ಕಿಸಾನ್ ಪೋರ್ಟಲ್ನಲ್ಲಿ ಲಭ್ಯವಿರುವ ವಿವರಗಳ ಪ್ರಕಾರ ಯೋಜನೆ ಪ್ರಯೋಜನ ತ್ಯಜಿಸಲು ಸಿದ್ಧರಿರುವ ರೈತರು ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸುವ ಅಗತ್ಯವಿದೆ. ನಂತರ ತಮ್ಮ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ಜನರೇಟ್ ಮಾಡಿದರೆ ಪಿಎಂ-ಕಿಸಾನ್ ಫಲಾನುಭವಿಯನ್ನು ಗುರುತಿಸಲಾಗುತ್ತದೆ.
ಅದರ ನಂತರ ಫಲಾನುಭವಿಯು ಯೋಜನೆಯ ಪ್ರಯೋಜನಗಳನ್ನು ಬಿಟ್ಟುಕೊಡಬಹುದು. ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ ಅರ್ಹ ರೈತ ಕುಟುಂಬಗಳು ಪ್ರತಿ ನಾಲ್ಕು ತಿಂಗಳಿಗೊಮ್ಮೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಮೂರು ಸಮಾನ ಕಂತುಗಳಲ್ಲಿ ವಾರ್ಷಿಕ 6,000 ರೂ ಪಡೆಯುತ್ತವೆ. ಈ ಯೋಜನೆಯನ್ನು ಫೆಬ್ರವರಿ 24, 2019 ರಂದು 2019 ರ ಲೋಕಸಭಾ ಚುನಾವಣೆಯ ಮೊದಲು ಪ್ರಾರಂಭಿಸಲಾಯಿತು.
ಇದೀಗ ಪಿಎಂ-ಕಿಸಾನ್ನ 16 ಕಂತುಗಳನ್ನು ರೈತರಿಗೆ ಬಿಡುಗಡೆ ಮಾಡಲಾಗಿದೆ. ಈ ವರ್ಷದ ಫೆಬ್ರವರಿ 29 ರಂದು ಮಹಾರಾಷ್ಟ್ರದ ಯವತ್ಮಾಲ್ನಿಂದ ಪ್ರಧಾನಿ ನರೇಂದ್ರ ಮೋದಿ 9.09 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 16 ನೇ ಕಂತನ್ನು ವರ್ಗಾಯಿಸಿದ್ದಾರೆ. ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಾಕಿಯಿರುವ 17 ನೇ ಕಂತಿನ ಹಣವನ್ನು ಯಾವುದೇ ಸಮಯದಲ್ಲಿ ಬಿಡುಗಡೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ.
ಪಿಎಂ ಕಿಸಾನ್ನ 16ನೇ ಕಂತು ಪಡೆದ 9.09 ಕೋಟಿ ರೈತರಲ್ಲಿ ಗರಿಷ್ಠ 2.03 ಕೋಟಿ ಫಲಾನುಭವಿಗಳು ಉತ್ತರ ಪ್ರದೇಶದಲ್ಲಿದ್ದು, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (89.66 ಲಕ್ಷ), ಮಧ್ಯಪ್ರದೇಶ (79.93 ಲಕ್ಷ), ಬಿಹಾರ (75.79 ಲಕ್ಷ) ರಾಜಸ್ಥಾನ (62.66 ಲಕ್ಷ) ಇದೆ.