ಶಿವಮೊಗ್ಗ: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಭದ್ರಾವತಿಯ ಬಲ್ಕಿಷ್ ಬಾನು ಅವರಿಗೆ ಶಾಸಕಿಯಾಗುವ ಯೋಗ ಒದಗಿ ಬಂದಿದೆ.
ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳಲ್ಲಿ ಎರಡು ದಶಕಕ್ಕೂ ಅಧಿಕಕಾಲ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ಅವಕಾಶ ನೀಡಿದ್ದಾರೆ. ಮೂರೂವರೆ ದಶಕಗಳ ಹಿಂದೆ ಶಿಕ್ಷಕ ವೃತ್ತಿಯನ್ನು ತೊರೆದು ಬಲ್ಕಿಷ್ ಬಾನು ರಾಜಕೀಯಕ್ಕೆ ಪ್ರವೇಶಿಸಿದ್ದರು. 1986ರಲ್ಲಿ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಡಿ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೊಂಡ ಜಿಲ್ಲಾ ಪರಿಷತ್ ಗೆ ಜನತಾ ಪಕ್ಷದ ಸದಸ್ಯರಾಗಿ ಬಲ್ಕಿಷ್ ಬಾನು ಚುನಾಯಿತರಾಗಿದ್ದರು. ಯಾವುದೇ ವಿಷಯಗಳ ಬಗ್ಗೆ ಅವರು ಸಮರ್ಥವಾಗಿ ಮಾತನಾಡಬಲ್ಲವರಾಗಿದ್ದು, ಹಿರಿಯ ರಾಜಕಾರಣಿಗಳ ಗಮನ ಸೆಳೆದಿದ್ದರು. ಜಿಲ್ಲಾ ಪಂಚಾಯತ್ ಸದಸ್ಯರಾಗಿ 1992 ರಲ್ಲಿ ಮತ್ತೊಮ್ಮೆ ಜಯಗಳಿಸಿದ ಅವರು ಅಧ್ಯಕ್ಷರಾಗಿ 5 ವರ್ಷ ಪೂರ್ಣಾವಧಿ ಕಾರ್ಯ ನಿರ್ವಹಿಸಿದ್ದರು. 1998 ರಲ್ಲಿ ವಿಧಾನ ಪರಿಷತ್ ಸ್ಥಳಿಯ ಸಂಸ್ಥೆಗಳ ಕ್ಷೇತ್ರದಿಂದ ಜನತಾದಳದಿಂದ ಸ್ಪರ್ಧಿಸಿ 37 ಮತಗಳ ಅಂತರದಿಂದ ಸೋಲು ಕಂಡಿದ್ದರು. ನಂತರ ಜನತಾದಳ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬಲ್ಕಿಷ್ ಬಾನು ಜಿಲ್ಲಾ ಕಾಂಗ್ರೆಸ್, ಕೆಪಿಸಿಸಿ, ಎಐಸಿಸಿ ಮಟ್ಟದಲ್ಲಿ ಸೇವೆ ಸಲ್ಲಿಸಿದ್ದರು.
2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಅವರಿಗೆ ವಿಧಾನ ಪರಿಷತ್ ಸದಸ್ಯರಾಗುವ ಅವಕಾಶ ಒದಗಿ ಬಂದಿದೆ. ಕಾಂಗ್ರೆಸ್ ಪಕ್ಷ ಹೆಚ್ಚಿನ ಸದಸ್ಯ ಬಲ ಹೊಂದಿರುವುದರಿಂದ ಪಕ್ಷದ 7 ಅಭ್ಯರ್ಥಿಗಳೂ ಆಯ್ಕೆಯಾಗುವುದು ಖಚಿತವಾಗಿದೆ.