ಶಿರಸಿ: ಅತ್ಯಾಚಾರ ಪ್ರಕರಣದ ಆರೋಪಿ ಬಂಧಿಸಲು ತೆರಳಿದ್ದಾಗ ಕಲ್ಲು ತೂರಾಟ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ.
ಅರ್ಜುನ ಅಲಿಯಾಸ್ ಅರುಣ ಲಕ್ಷ್ಮಣಗೌಡನನ್ನು ಬಂಧಿಸಲು ತೆರಳಿದ್ದ ಸಮವಸ್ತ್ರದಲ್ಲಿದ್ದ ಮೂವರು ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಅರ್ಜುನ ವಿರುದ್ಧ ಬನವಾಸಿ ಠಾಣೆಯಲ್ಲಿ ಅತ್ಯಾಚಾರ ಕೇಸ್ ದಾಖಲಾಗಿತ್ತು. ಶಿರಸಿ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಉಡುಪಿ ಜಿಲ್ಲೆ ಕುಂದಾಪುರ ಠಾಣೆಯಲ್ಲಿಯೂ ಒಂದು ಕೇಸ್ ದಾಖಲಾಗಿತ್ತು.
ಯುವತಿಯರ ಜೊತೆ ಚಾಟ್ ಮಾಡುತ್ತಾ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಅರ್ಜುನ ನಂತರ ಸಲುಗೆ ಬೆಳೆಸಿ ಬೆತ್ತಲೆ ಫೋಟೋ ತೆಗೆದುಕೊಂಡು ಅವರನ್ನು ಬ್ಲಾಕ್ಮೇಲ್ ಮಾಡುತ್ತಿದ್ದ. ಜಾಲತಾಣದಲ್ಲಿ ಬೆತ್ತಲೆ ಫೋಟೋ ಅಪ್ಲೋಡ್ ಮಾಡುವುದಾಗಿ ಬೆದರಿಸಿ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದ. ಅರ್ಜುನನಿಂದ ದೌರ್ಜನ್ಯಕ್ಕೊಳಗಾದ ಕೆಲವರು ಠಾಣೆಗೆ ದೂರು ನೀಡಿದ್ದರು.
ಅರ್ಜುನನನ್ನು ಪೊಲೀಸರು ಬಂಧಿಸಲು ಹೋಗಿದ್ದ ವೇಳೆ ತಾಯಿ ನಾಗವೇಣಿ ಲಕ್ಷ್ಮಣಗೌಡ, ಸಂಬಂಧಿ ಬಾಲಚಂದ್ರ ಗೌಡ ಹಲ್ಲೆ ಮಾಡಿದ್ದಾರೆ. ಬನವಾಸಿ ಪೊಲೀಸ್ ಠಾಣೆಯ ಸಿಬ್ಬಂದಿ ಮಂಜುನಾಥ, ಜಗದೀಶ, ಪಿ ಮಂಜಪ್ಪ ಅವರ ಮೇಲೆ ಕಲ್ಲು, ಹೆಂಚುಗಳ ತುಂಡಿನಿಂದ ಹಲ್ಲೆ ನಡೆಸಲಾಗಿದೆ. ಕಲ್ಲು ತೂರಾಟ ಮಾಡಿದ ಬಾಲಚಂದ್ರ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ.
ಅತ್ಯಾಚಾರ ಆರೋಪಿ ಅರ್ಜುನ ತಾಯಿ ನಾಗವೇಣಿ ಲಕ್ಷ್ಮಣಗೌಡ ಪರಾರಿಯಾಗಿದ್ದಾರೆ. ಪೊಲೀಸರು ಬಂಧಿಸಿದಾಗ ಇಲಿ ಪಾಷಾಣ ಸೇವಿಸಿ ಬಾಲಚಂದ್ರ ಹೈಡ್ರಾಮಾ ಮಾಡಿದ್ದಾನೆ. ಬಾಲಚಂದ್ರ ಗೌಡನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ಸಂಬಂಧ ಶಿರಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.