ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ನಿಗದಿಪಡಿಸಿದ ಶುಲ್ಕ ವಿವರ ಪ್ರಕಟಿಸುವಂತೆ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ 2024- 25 ನೇ ಶೈಕ್ಷಣಿಕ ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿ ಮತ್ತು ಶುಲ್ಕ ವಸೂಲಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ದಾಖಲಾತಿ ಪ್ರಕ್ರಿಯೆ, ದಾಖಲಾತಿ ಶುಲ್ಕ ಮತ್ತು ಇನ್ನಿತರ ಶುಲ್ಕವನ್ನು ಪಡೆಯುವ ಸಂಬಂಧ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಶುಲ್ಕ ವಿವರ ಪ್ರಕಟಿಸಬೇಕು. ಶಿಕ್ಷಣ ಹಕ್ಕು ಕಾಯ್ದೆ 2009ರ ಅನ್ವಯ ಎಲ್ಲಾ ಖಾಸಗಿ ಶಾಲೆಗಳು ತಾವು ಅಧಿಸೂಚಿಸಿದ ಶುಲ್ಕವನ್ನು ತಮ್ಮ ಶಾಲಾ ಶಾಲಾ ತಾಣಗಳಲ್ಲಿ, ಸೂಚನಾ ಫಲಕದಲ್ಲಿ, ಇಲಾಖೆಯ ಜಾಲತಾಣದಲ್ಲಿ ಸಾರ್ವಜನಿಕರು ಮತ್ತು ಪೋಷಕರಿಗೆ ಲಭ್ಯವಾಗುವಂತೆ ಪ್ರಕಟಪಡಿಸಲು ಶುಲ್ಕ ವಸೂಲಾತಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೆಕ್ಷನ್ -13ರ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸಲಾಗಿದೆ.
ತಮ್ಮ ವ್ಯಾಪ್ತಿಯ ಯಾವುದೇ ಶಾಲೆಗಳು ನಿಯಮ ಉಲ್ಲಂಘಿಸಿದ ಬಗ್ಗೆ ದೂರುಗಳು ದಾಖಲಾದಲ್ಲಿ ಅಗತ್ಯ ಕ್ರಮವಹಿಸಲು ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪ ನಿರ್ದೇಶಕರಿಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.