ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ‘ಮೇರು’ ಎಂಬ ನಾಯಿ ಇತ್ತೀಚೆಗಷ್ಟೆ ನಿವೃತ್ತಿಯಾಗಿದೆ. ಮೇರು ಶ್ವಾನಕ್ಕೀಗ 9 ವರ್ಷ. ಇದೊಂದು ಟ್ರ್ಯಾಕರ್ ಡಾಗ್ ಆಗಿತ್ತು. ನಿವೃತ್ತಿಯ ನಂತರ ಭಾರತೀಯ ಸೇನೆಯ ನಾಯಿಗಳ ಭವಿಷ್ಯವೇನು ಎಂಬುದು ಅನೇಕರಿಗೆ ತಿಳಿದಿಲ್ಲ.
ಬುದ್ಧಿವಂತಿಕೆ ಮತ್ತು ಚಾಣಾಕ್ಷತೆಯ ಆಧಾರದ ಮೇಲೆ ಭಾರತೀಯ ಸೇನೆಯಲ್ಲಿ ನಾಯಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ನಾಯಿ ಹೇಗೆ ವರ್ತಿಸುತ್ತದೆ ಎಂಬುದನ್ನು ಅಳೆಯಲಾಗುತ್ತದೆ. ನೇಮಕಾತಿಯ ನಂತರ ನಾಯಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ವಾಸನೆಯ ಮೂಲಕ ಸ್ಫೋಟಕ, ಆರೋಪಿಗಳ ಸುಳಿವು ಪತ್ತೆ ಮಾಡಲು ನಾಯಿಗಳನ್ನು ತರಬೇತಿಗೊಳಿಸಲಾಗುತ್ತದೆ.
ಹೆಚ್ಚಾಗಿ ಲ್ಯಾಬ್ರಡಾರ್, ಜರ್ಮನ್ ಶೆಫರ್ಡ್ ಮತ್ತು ಬೆಲ್ಜಿಯನ್ ಶೆಫರ್ಡ್ ತಳಿಗಳ ನಾಯಿಗಳನ್ನು ಸೇನೆ ನೇಮಿಸಿಕೊಳ್ಳುತ್ತದೆ. ಇವುಗಳಿಗೆ ರ್ಯಾಂಕ್ ಮತ್ತು ಹೆಸರುಗಳನ್ನು ಸಹ ನೀಡಲಾಗುತ್ತದೆ. ಸೇನೆಗೆ ಸೇರುವ ಎಲ್ಲಾ ನಾಯಿಗಳ ತರಬೇತಿ ಬಹಳ ಕಠಿಣವಾಗಿರುತ್ತದೆ. ಶ್ವಾನ ತರಬೇತಿ ಪರೀಕ್ಷೆಯನ್ನು ಮೀರಟ್ನ ರೇಮಂಡ್ ಮತ್ತು ವೆಟರ್ನರಿ ಕಾರ್ಪ್ಸ್ ಸೆಂಟರ್ ಮತ್ತು ಕಾಲೇಜಿನಲ್ಲಿ ನಡೆಸಲಾಗುತ್ತದೆ. 1960ರಲ್ಲಿ ಇಲ್ಲಿ ನಾಯಿ ತರಬೇತಿ ಶಾಲೆಯನ್ನು ಸ್ಥಾಪಿಸಲಾಯಿತು.
ಸೇನೆಯ ನಾಯಿಗಳು ಏನು ಮಾಡುತ್ತವೆ ?
ಸೇನೆ ಸೇರಿದ ನಾಯಿಗಳು ಕಾವಲು ಕಾಯುವುದು, ಗಸ್ತು ತಿರುಗುವುದು, ಐಇಡಿ ಸ್ಫೋಟಕಗಳನ್ನು ಪತ್ತೆ ಹಚ್ಚುವುದು, ಡ್ರಗ್ಸ್ ಪತ್ತೆ, ಹಿಮಪಾತದಲ್ಲಿರುವ ಅವಶೇಷಗಳ ಪತ್ತೆ, ಪರಾರಿಯಾಗಿರುವವರು ಮತ್ತು ಭಯೋತ್ಪಾದಕರ ಅಡಗುತಾಣಗಳನ್ನು ಪತ್ತೆಹಚ್ಚುವ ಕೆಲಸ ಮಾಡುತ್ತವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗೂ ನಾಯಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಭಾರತೀಯ ಸೇನೆಯಲ್ಲಿ 25 ಕ್ಕೂ ಹೆಚ್ಚು ಶ್ವಾನ ಘಟಕಗಳಿವೆ.
ಸೇನೆಯ ನಾಯಿಗಳಿಗೆ ಸಂಬಳವೆಷ್ಟು ?
ಸೇನೆಯಲ್ಲಿ ನೇಮಕಗೊಂಡ ಶ್ವಾನಗಳಿಗೆ ಪ್ರತಿ ತಿಂಗಳು ಸಂಬಳ ಕೊಡುವುದಿಲ್ಲ. ಆದರೆ ಅವುಗಳ ಆಹಾರ ಮತ್ತು ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಸೇನೆ ತೆಗೆದುಕೊಳ್ಳುತ್ತದೆ. ನಾಯಿಯನ್ನು ನೋಡಿಕೊಳ್ಳಲು ನಿರ್ವಾಹಕನನ್ನು ನೇಮಕ ಮಾಡಲಾಗುತ್ತದೆ.
ಸೈನ್ಯದ ಶ್ವಾನ ಘಟಕಗಳಿಗೆ ಸೇರುವ ನಾಯಿಗಳು ಸೇರ್ಪಡೆಯಾದ 10-12 ವರ್ಷಗಳ ನಂತರ ನಿವೃತ್ತಿ ಹೊಂದುತ್ತವೆ. ದೈಹಿಕ ಗಾಯ, ಹ್ಯಾಂಡ್ಲರ್ನ ಸಾವು ಅಥವಾ ಇನ್ನಿತರ ಮಾನಸಿಕ ತೊಂದರೆಗಳಿಂದ ಕೆಲವು ನಾಯಿಗಳು ಬೇಗನೆ ನಿವೃತ್ತಿ ಹೊಂದುತ್ತವೆ.
ನಿವೃತ್ತಿಯ ನಂತರ ಶ್ವಾನಗಳ ಹತ್ಯೆ ?
ನಿವೃತ್ತಿಯ ನಂತರ ನಾಯಿಯನ್ನು ಯಾರಾದರೂ ದುರುಪಯೋಗಪಡಿಸಿಕೊಳ್ಳುವ ಆತಂಕದಿಂದ ಈ ಮೊದಲು ಅವುಗಳಿಗೆ ಗುಂಡು ಹಾರಿಸಲಾಗುತ್ತಿತ್ತು. ಏಕೆಂದರೆ ಸೇನೆಯ ಸುರಕ್ಷಿತ ಹಾಗೂ ರಹಸ್ಯ ನೆಲೆಗಳ ಬಗ್ಗೆಯೂ ಈ ನಾಯಿಗಳಿಗೆ ಸಂಪೂರ್ಣ ಮಾಹಿತಿ ಇರುತ್ತದೆ. 2015 ರಲ್ಲಿ ಸೇನೆಯು ನಾಯಿಗಳ ದಯಾಮರಣವನ್ನು ನಿಲ್ಲಿಸಿದೆ. ನಿವೃತ್ತಿಯ ನಂತರ ನಾಯಿಗಳಿಗೆ ಗುಂಡು ಹಾರಿಸುವುದಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದರೆ ಅವುಗಳಿಗೆ ದಯಾಮರಣ ನೀಡಲಾಗುತ್ತದೆ.
ನಿವೃತ್ತಿಯ ನಂತರ ಸೇನೆಯ ನಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳುವ ಜನರಿಗೆ ನೀಡಲಾಗುತ್ತದೆ. ಇದಕ್ಕಾಗಿ ಭಾರತೀಯ ಸೇನೆಯ ಬಾಂಡ್ ಪೇಪರ್ಗೆ ಸಹಿ ಹಾಕಬೇಕು. ನಾಯಿಗಳಿಗಾಗಿ ಸ್ಥಾಪಿಸಲಾದ ಮನೆಗಳು ಮತ್ತು ಎನ್ಜಿಒಗಳಲ್ಲಿ ಸಹ ಅವುಗಳನ್ನು ಇಡಲಾಗುತ್ತದೆ.