ಬೆಂಗಳೂರು: ಪ್ರಜ್ವಲ್ ರೇವಣ್ಣ ಹಾಗೂ ಹೆಚ್.ಡಿ. ರೇವಣ್ಣ ಪ್ರಕರಣಕ್ಕೆ ಸಂಬಂಧಿದ್ಸಿದಂತೆ ನಮ್ಮ ಕುಟುಂಬದ ಎಲ್ಲರ ಫೋನ್ ಟ್ಯಾಪ್ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನನ್ನ ಹಾಗೂ ನನ್ನ ಜೊತೆ ಇರುವ 45 ಜನರ ಫೋನ್ ಟ್ಯಾಪ್ ಮಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ನಮ್ಮ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಮ್ಮ ಕುಟುಂಬವನ್ನು ಮುಗಿಸಲು ಈ ರೀತಿ ಷಡ್ಯಂತ್ರ ನಡೆಸುತ್ತಿದ್ದಾರೆ. ನಾನು ಅಕ್ರಮದ ಬಗ್ಗೆ ಮಾತನಾಡುತ್ತೇನೆ ಎಂದು ನನ್ನ ಮೇಲೆ ಷಡ್ಯಂತ್ರ ನಡೆದಿದೆ ಎಂದು ಹೇಳಿದರು.
ಈ ಪ್ರಕರಣದಿಂದ ನೊಂದು ದೇವೇಗೌಡರು ರಾಜೀನಾಮೆಗೆ ಮುಂದಾಗಿದ್ದರು. ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಡಲು ತೀರ್ಮಾನಿಸಿದ್ದರು. ಯಾರೋ ಮಾಡಿದ ತಪ್ಪಿಗೆ ನೀವು ರಾಜೀನಾಮೆ ಕೊಡಬೇಡಿ ಎಂದೆ ಎಂದರು.
ಪತ್ರಿಕೆಗಳಿಗೆ ಎಸ್ಐಟಿ ಮಾಹಿತಿ ಯಾಕೆ ಸೋರಿಕೆ ಮಾಡುತ್ತಿದೆ? ಡಿ.ಕೆ.ಶಿವಕುಮಾರ್ ದೆವ್ವದ ಬಾಯಲ್ಲಿ ಭಗವದ್ಗೀತೆ ಬರುತ್ತಾ? ಎಂದು ಕಿಡಿಕಾರಿದ್ದಾರೆ.