ಸ್ಮಾರ್ಟ್‌ಫೋನ್, ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿಬಿಟ್ಟಿವೆ. ಬಹುತೇಕ ಎಲ್ಲರೂ ಈ ಸಾಧನಗಳನ್ನು ಬಳಸುತ್ತಾರೆ. ಇಂಟರ್ನೆಟ್ ಬಳಕೆ ಕೂಡ ಸರ್ವೇ ಸಾಮಾನ್ಯವಾಗಿದೆ. ಟಿಕೆಟ್ ಬುಕ್ಕಿಂಗ್, ಬಿಲ್ ಪೇಮೆಂಟ್, ಶಾಪಿಂಗ್ ಎಲ್ಲವೂ ಈಗ ಆನ್‌ಲೈನ್‌ನಲ್ಲಿಯೇ ಆಗುತ್ತವೆ.
ದೇಶ-ವಿದೇಶದ ಯಾವುದೇ ವಿಷಯದ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಚಾಟಿಂಗ್, ವಿಡಿಯೋ ಕಾಲ್, ಆಡಿಯೋ ಕಾಲ್ ಹೀಗೆ ಎಲ್ಲವೂ ಸಾಧ್ಯ. ಈ ಆಧುನಿಕತೆಯೊಂದಿಗೆ ಹ್ಯಾಕಿಂಗ್ ಕೂಡ ಬಳಕೆದಾರರಿಗೆ ಆತಂಕ ತರುತ್ತಲೇ ಇದೆ. ಈ ಸಾಧನಗಳಿಂದಾಗಿಯೇ ಜನರು ಹ್ಯಾಕರ್‌ಗಳಿಗೆ ಬಲಿಪಶುವಾಗ್ತಿದ್ದಾರೆ.
ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಅಂದರೆ ಜನವರಿಯಿಂದ ಮಾರ್ಚ್‌ವರೆಗೆ ಪ್ರತಿ ನಾಲ್ವರಲ್ಲಿ ಒಬ್ಬರು ಹ್ಯಾಕಿಂಗ್ ಎದುರಿಸಿದ್ದಾರೆ. ವರದಿಯ ಪ್ರಕಾರ ಮಾಲ್ವೇರ್ ಇನ್ನೂ ಪ್ರಮುಖ ಸೈಬರ್ ಬೆದರಿಕೆಯಾಗಿ ಉಳಿದಿದೆ.
ವರದಿಯಲ್ಲೇನಿದೆ?
ಈ ಅವಧಿಯಲ್ಲಿ ಭಾರತದಲ್ಲಿ ಶೇ.22.9ರಷ್ಟು ಇಂಟರ್ನೆಟ್ ಬಳಕೆದಾರರು ವೆಬ್‌ನಿಂದ ಬರುವ ಬೆದರಿಕೆಗಳನ್ನು ಎದುರಿಸಿದ್ದಾರೆ. ಜಾಗತಿಕ ಭದ್ರತಾ ಕಂಪನಿ ಕ್ಯಾಸ್ಪರ್ಸ್ಕಿಯ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಅದೇ ಸಮಯದಲ್ಲಿ ಸುಮಾರು 20.1 ಪ್ರತಿಶತದಷ್ಟು ಬಳಕೆದಾರರು ತಮ್ಮ ಕಂಪ್ಯೂಟರ್‌ಗಳಲ್ಲಿ ಇರುವ ಬೆದರಿಕೆಗಳಿಂದ ತೊಂದರೆಗೀಡಾಗಿದ್ದಾರೆ.
ಮಾಲ್ವೇರ್ ಈಗಲೂ ಬಹು ದೊಡ್ಡ ಆನ್‌ಲೈನ್ ಬೆದರಿಕೆಯಾಗಿದೆ. ಹ್ಯಾಕರ್‌ಗಳು ಇಂಟರ್ನೆಟ್ ಬ್ರೌಸರ್‌ಗಳು ಮತ್ತು ಅವುಗಳ ಆಡ್-ಆನ್‌ಗಳಲ್ಲಿನ ದುರ್ಬಲತೆಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ತ್ರೈಮಾಸಿಕದಲ್ಲಿ “ಫೈಲ್-ಲೆಸ್ ಮಾಲ್‌ವೇರ್” ಅತ್ಯಂತ ಅಪಾಯಕಾರಿ ಎಂದು ಸಾಬೀತಾಗಿದೆ. ಏಕೆಂದರೆ ಅದು ದಾಳಿಯ ಯಾವುದೇ ಪುರಾವೆಗಳನ್ನು ಬಿಡುವುದಿಲ್ಲ.
ಭಾರತೀಯ ಬಳಕೆದಾರರನ್ನು ವಂಚಿಸಲು ಫಿಶಿಂಗ್, ಬೈಟಿಂಗ್ ಮತ್ತು ಪ್ರಿಟೆಕ್ಸ್‌ಟಿಂಗ್‌ನಂತಹ ಸಾಮಾಜಿಕ ಎಂಜಿನಿಯರಿಂಗ್ ವಿಧಾನಗಳನ್ನು ಸಹ ಬಳಸಲಾಗುತ್ತಿದೆ. ಜನವರಿಯಿಂದ ಮಾರ್ಚ್ವರೆಗೆ ಇಂತಹ 12.4 ಮಿಲಿಯನ್ ಇಂಟರ್ನೆಟ್ ಥ್ರೆಟ್‌ಗಳನ್ನು ಪತ್ತೆ ಮಾಡಲಾಗಿದೆ. ಅದೇ ಸಮಯದಲ್ಲಿ ಕಂಪ್ಯೂಟರ್‌ನಲ್ಲಿ ಇರುವ 1 ಕೋಟಿ 67 ಲಕ್ಷಕ್ಕೂ ಹೆಚ್ಚು ಬೆದರಿಕೆಗಳನ್ನು ಸಹ ಪತ್ತೆಹಚ್ಚಿ ನಿರ್ಬಂಧಿಸಲಾಗಿದೆ.