ಹೈದರಾಬಾದ್: ಕಿರುತೆರೆ ಖ್ಯಾತ ನಟಿ ಪವಿತ್ರಾ ಜಯರಾಂ ಕೆಲ ದಿನಗಳ ಹಿಂದಷ್ಟೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪವಿತ್ರಾ ಜಯರಾಂ ಸಾವಿನಿಂದ ತೀವ್ರವಾಗಿ ಮನನೊಂದಿದ್ದ ಆಕೆಯ ಸ್ನೇಹಿತ ಚಂದ್ರಕಾಂತ್ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೈದರಾಬಾದ್ ನ ಮಣಿಕೊಂಡದಲ್ಲಿರುವ ಫ್ಲಾಟ್ ನಲ್ಲಿ ನಟ ಚಂದ್ರಕಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪವಿತ್ರಾ ಜಯರಾಂ ಹಾಗೂ ಚಂದ್ರಕಾಂತ್ ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳುತ್ತಿದ್ದಾಗ ಅಪಘಾತದಲ್ಲಿ ಪವಿತ್ರಾ ಜಯರಾಂ ಮೃತಪಟ್ಟಿದ್ದರು. ಅಪಘಾತದಲ್ಲಿ ಚಂದ್ರಕಾಂತ್ ಅವರ ಕೈ ಮುರಿದಿತ್ತು ಎನ್ನಲಾಗಿದೆ.
ಪವಿತ್ರ ಜಯರಾಂ ಸಾವಿನ ಬಳಿಕ ತೀವ್ರವಾಗಿ ನೊಂದಿದ್ದ ಚಂದ್ರಕಾಂತ್ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ತೆಲಗು ಕಿರುತೆರೆಯಲ್ಲಿ ಖ್ಯಾತಿ ಪಡೆದಿದ್ದ ಚಂದ್ರಕಾಂತ್ ಕೂಡ ಪವಿತ್ರಾ ಜಯರಾಂ ನಟಿಸುತ್ತಿದ್ದ ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
2015ರಲ್ಲಿ ಶಿಲ್ಪಾ ಎಂಬ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ ಚಂದ್ರಕಾಂತ್ ದಂಪತಿಗೆ ಇಬ್ಬರು ಮಕ್ಕಳಿದ್ದರು. ಬಳಿಕ ನಟಿ ಪವಿತ್ರಾ ಜಯರಾಂ ಪರಿಚಯವಾದ ನಂತರ ಪತ್ನಿ ಶಿಲ್ಪಾ ಹಾಗೂ ಮಕ್ಕಳಿಂದ ಚಂದ್ರಕಾಂತ್ ದೂರವಾಗಿದ್ದರು. ಪವಿತ್ರಾ ಕೂಡ ಹಲವು ವರ್ಷಗಳಿಂದ ತನ್ನ ಪತಿಯಿಂದ ದೂರವಾಗಿ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದರು. ಮಣಿಕೊಂಡದಲ್ಲಿರುವ ಫ್ಲಾಟ್ ನಲ್ಲಿ ಪವಿತ್ರಾ ಜಯರಾಂ, ಚಂದ್ರಕಾಂತ್ ಹಾಗೂ ಪವಿತ್ರಾ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು.
ನಿನ್ನೆ ನಟಿ ಪವಿತ್ರಾ ಜಯರಾಂ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದ ಚಂದ್ರಕಾಂತ್, ನಿಮ್ಮನ್ನು ಮರೆಯಲು ಸಾಧ್ಯವಿಲ್ಲ. ನಮ್ಮ ಜಿಮ್ ಕೋಚ್ ಕರೆ ಮಾಡುತ್ತಿದ್ದಾರೆ. ಜಿಮ್ ಗೆ ಹೋಗೋಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ ನಟ ಫ್ಲಾಟ್ ನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.