ಮಹಿಳೆಯರು ಮತ್ತು ಪುರುಷರ ದೇಹವು ಆಂತರಿಕವಾಗಿ ಮತ್ತು ಬಾಹ್ಯವಾಗಿ ವಿಭಿನ್ನವಾಗಿವೆ. ಹಾಗಾಗಿಯೇ ಎಲ್ಲದಕ್ಕೂ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತವೆ. ಅದೇ ರೀತಿ ತೂಕ ಇಳಿಕೆಯ ಪ್ರಕ್ರಿಯಲ್ಲಿ ಕೂಡ ಪುರುಷ ಮತ್ತು ಮಹಿಳೆಯರಲ್ಲಿ ಸಾಮ್ಯತೆ ಇಲ್ಲ. ಒಂದೇ ರೀತಿಯ ಡಯಟ್ ಮತ್ತು ವ್ಯಾಯಾಮ ಮಾಡಿದರೂ ತೂಕ ಇಳಿಕೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ.
ಅಧ್ಯಯನಗಳ ಪ್ರಕಾರ ಪುರುಷರಿಗಿಂತ ಮಹಿಳೆಯರಿಗೆ ತೂಕವನ್ನು ಕಳೆದುಕೊಳ್ಳುವುದು ಹೆಚ್ಚು ಕಷ್ಟಕರ. ಇದಕ್ಕೆ ಕಾರಣವೆಂದರೆ ಚಯಾಪಚಯ ಮತ್ತು ಹಾರ್ಮೋನುಗಳು. ಇದು ಮಹಿಳೆಯರು ಮತ್ತು ಪುರುಷರಲ್ಲಿ ಪರಸ್ಪರ ಭಿನ್ನವಾಗಿರುತ್ತದೆ.
ದೇಹದ ವಿನ್ಯಾಸ
ಸಾಮಾನ್ಯವಾಗಿ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚಿನ ಶೇಕಡಾವಾರು ದೇಹದ ಕೊಬ್ಬನ್ನು ಮತ್ತು ಕಡಿಮೆ ಶೇಕಡಾವಾರು ಸ್ನಾಯುಗಳನ್ನು ಹೊಂದಿರುತ್ತಾರೆ. ಈ ಕಾರಣದಿಂದಾಗಿ, ತೂಕ ನಷ್ಟ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ.
ಸ್ಥೂಲಕಾಯತೆಗೆ ಸಂಬಂಧಿಸಿದ ರೋಗಗಳು
ಥೈರಾಯ್ಡ್, ಪಿಸಿಓಎಸ್‌ನಂತಹ ವೈದ್ಯಕೀಯ ಪರಿಸ್ಥಿತಿಗಳು ಸ್ಥೂಲಕಾಯತೆಗೆ ಸಂಬಂಧಿಸಿವೆ. ಈ ರೋಗದ ಅಪಾಯವು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿರುತ್ತದೆ. ಹಾಗಾಗಿ ಈ ಕಾಯಿಲೆಗಳಿಂದ ಬಳಲುತ್ತಿರುವ ಮಹಿಳೆಯರು ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಕಡುಬಯಕೆಗಳು ಮತ್ತು ಹಸಿವು
ಮಹಿಳೆಯರಿಗೆ ಹೋಲಿಸಿದರೆ ಪುರುಷರು ತಮ್ಮ ಕ್ರೇವಿಂಗ್ಸ್ ಹಾಗೂ ಹಸಿವನ್ನು ನಿಗ್ರಹಿಸುವ ಹೆಚ್ಚಿನ ಸಾಮರ್ಥ್ಯ ಹೊಂದಿರುತ್ತಾರೆ. ಮಹಿಳೆಯರಲ್ಲಿ ಇದು ಕಡಿಮೆ ಇರುವುದರಿಂದ ತೂಕ ಕಳೆದುಕೊಳ್ಳುವುದು ಪ್ರಯಾಸವೆನಿಸುತ್ತದೆ.
ಗರ್ಭಾವಸ್ಥೆ
ಗರ್ಭಾವಸ್ಥೆಯಲ್ಲಿ ಸಹಜವಾಗಿಯೇ ಮಹಿಳೆಯರ ತೂಕ ಹೆಚ್ಚಾಗುತ್ತದೆ. ಈ ರೀತಿ ಗರ್ಭಾವಸ್ಥೆಯಲ್ಲಿ ಅಧಿಕ ತೂಕವನ್ನು ಹೊಂದಿರುವ ಮಹಿಳೆಯರು ನಂತರ ಕೂಡ ಸ್ಥೂಲಕಾಯತೆಗೆ ತುತ್ತಾಗಬಹುದು. ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯಾಗಿ ಒಂದು ವರ್ಷದವರೆಗೆ ಮಹಿಳೆಯರ ತೂಕ ಕೊಂಚ ಜಾಸ್ತಿ ಇರುವುದು ಸಾಮಾನ್ಯ ಸಂಗತಿ.
ಲೈಂಗಿಕ ಹಾರ್ಮೋನುಗಳು
ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್‌ನಂತಹ ಲೈಂಗಿಕ ಹಾರ್ಮೋನುಗಳು ದೇಹದ ರಚನೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ. ಮಹಿಳೆಯರಲ್ಲಿ ಈಸ್ಟ್ರೊಜೆನ್ ಮುಖ್ಯ ಹಾರ್ಮೋನ್. ಈ ಹಾರ್ಮೋನುಗಳ ಕಡಿಮೆ ಅಥವಾ ಹೆಚ್ಚಿನ ಮಟ್ಟಗಳು ಸ್ಥೂಲಕಾಯತೆ, ಹಸಿವಿನ ಕಡುಬಯಕೆಗಳು ಮತ್ತು ಇನ್ಸುಲಿನ್ ಸಂವೇದನೆಯ ಮೇಲೆ ಪರಿಣಾಮ ಬೀರುತ್ತವೆ.