ಬೆಂಗಳೂರು: ಒಂದೇ ವಿಷಯದ ಬಗ್ಗೆ ಎರಡು ನ್ಯಾಯಾಲಯಗಳಲ್ಲಿ ದೂರು ದಾಖಲಾಗಿದ್ದ ಸಂದರ್ಭದಲ್ಲಿ ಆ ಕೇಸ್ ಗಳನ್ನು ಒಂದು ನ್ಯಾಯಾಲಯಕ್ಕೆ ವರ್ಗಾಯಿಸಿ ಜಂಟಿ ವಿಚಾರಣೆ ನಡೆಸಬಹುದು ಎಂದು ಹೈಕೋರ್ಟ್ ಹೇಳಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಎಂಪ್ಲಾಯಿಸ್ ಕೋ ಆಪರೇಟಿವ್ ಹೌಸ್ ಬಿಲ್ಡಿಂಗ್ ಸೊಸೈಟಿ ಮತ್ತು ಶ್ರೀಮಾಯಿ ಬಿಲ್ಡರ್ಸ್ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರ ಏಕ ಸದಸ್ಯ ಪೀಠದಲ್ಲಿ ನಡೆದಿದೆ.
ಕೆಲವು ಕಾಲ ವಾದ, ಪ್ರತಿವಾದ ಆಲಿಸಿ ದಾಖಲೆಗಳನ್ನು ಹೈಕೋರ್ಟ್ ಪರಿಶೀಲಿಸಿದ್ದು, ನ್ಯಾಯಾಂಗದ ದಕ್ಷತೆ ಎತ್ತಿ ಹಿಡಿಯಲು, ವೈರುಧ್ಯದ ತೀರ್ಪುಗಳನ್ನು ತಪ್ಪಿಸಲು ಮತ್ತು ಕಾನೂನು ಪ್ರಕ್ರಿಯೆ ಸುಗಮಗೊಳಿಸುವ ಉದ್ದೇಶದಿಂದ ರಾಮನಗರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದಿರುವ ಖಾಸಗಿ ದೂರಿನ ವಿಚಾರಣೆ ಪ್ರಕ್ರಿಯೆ ಮತ್ತು ಬೆಂಗಳೂರಿನ 39ನೇ ಹೆಚ್ಚುವರಿ ಎಸಿಎಂ ನ್ಯಾಯಾಲಯದಲ್ಲಿರುವ ವಿಚಾರಣಾ ಪ್ರಕ್ರಿಯೆಗಳನ್ನು ಒಂದೇ ನ್ಯಾಯಾಲಯ ವಿಚಾರಣೆ ನಡೆಸುವುದು ಸೂಕ್ತ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಶಕ್ತ ಪ್ರಕರಣದಲ್ಲಿ ಖಾಸಗಿ ದೂರು ಮತ್ತು ಪೊಲೀಸರು ದಾಖಲಿಸಿದ ಎರಡು ಪ್ರಕರಣಗಳು ಒಂದೇ ವಿಷಯ ಮತ್ತು ಸಂಗತಿಗಳನ್ನು ಆಧರಿಸಿವೆ. ಎರಡು ವಿಚಾರಣೆಗಳ ಬಗ್ಗೆ ಪ್ರತ್ಯೇಕ ವಿಚಾರಣೆಗೆ ಅನುಮತಿ ನೀಡಿದರೆ ಸಿಆರ್ಪಿಸಿ ಸೆಕ್ಷನ್ 300ರ ಅನ್ವಯ ಒಂದು ವಿಚಾರಣೆಗೆ ನಿರ್ಬಂಧ ವಿಧಿಸಬೇಕಾಗುತ್ತದೆ. ಜೊತೆಗೆ ಇದು ಗೊಂದಲಕ್ಕೆ ಕಾರಣವಾಗುತ್ತದೆ. ಎರಡು ಪ್ರಕರಣಗಳ ವಿಚಾರಣೆಗಳನ್ನು ಒಟ್ಟಿಗೆ ನಡೆಸುವುದರಿಂದ ಎಲ್ಲಾ ಪಕ್ಷಗಾರರ ಹಕ್ಕುಗಳನ್ನು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶವನ್ನು ನ್ಯಾಯಾಲಯ ಹೊಂದಿದೆ ಎಂದು ಹೈಕೋರ್ಟ್ ನ್ಯಾಯಪೀಠ ತಿಳಿಸಿದೆ. ವಿಚಾರಣೆಯನ್ನು ರಾಮನಗರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಿದೆ.